ಯಾದಗಿರಿ : ಮುಸ್ಲಿಂ ಯುವಕನೊಬ್ಬ ಅಯ್ಯಪ್ಪ ಮಾಲೆಯನ್ನು ಧರಿಸಿ ನಿಷ್ಠೆ ಮತ್ತು ಶ್ರದ್ಧೆಯಿಂದ ಅಯ್ಯಪ್ಪ ಮಾಲಾಧಾರಿಗಳು ಪಾಲಿಸುವ ಪ್ರತಿಯೊಂದು ನಿಯಮಗಳನ್ನು ಪಾಲಿಸುವುದರ ಮೂಲಕ ಇಡೀ ದೇಶಕ್ಕೆ ಹಿಂದೂ-ಮುಸ್ಲಿಂ ಭಾವೈಕ್ಯತೆಯನ್ನು ಎತ್ತಿ ತೋರಿಸಿದ್ದಾರೆ. ಬಾಬ್ಲು ಅಫಸರ್ ಡಾಂಗೆ ಅಯ್ಯಪ್ಪ ಮಾಲೆ ಧರಿಸಿದ ಮುಸ್ಲಿಂ ಯುವಕ. ಮೂಲತಃ ಮಹಾರಾಷ್ಟ್ರದವರಾದ ಬಾಬ್ಲು ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್‍ನಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಪಟ್ಟಣದಲ್ಲಿ ಹಿಂದೂಗಳ ಜೊತೆ ಹೆಚ್ಚು ಒಡನಾಟವನ್ನು ಇಟ್ಟುಕೊಂಡಿದ್ದರು. ಬಾಬ್ಲು ಅವರು ತಮ್ಮ ಧರ್ಮದ ಅಲ್ಲಾನನ್ನು ಆರಾಧಿಸುವುದರ ಜೊತೆಗೆ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು. ಬಾಬ್ಲು ಅವರು ಅಲ್ಲಾ ಜೊತೆಗೆ ಹಿಂದೂ ದೇವರ ಪೂಜೆ ಮಾಡಿಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಬಾಬ್ಲು ಅವರು ಅಯ್ಯಪ್ಪ ಮಾಲೆಯನ್ನು ಧರಿಸಿದ್ದು, 41 ದಿನಗಳ ಕಾಲ ವ್ರತ ಆಚರಣೆ ಮಾಡಬೇಕಾಗಿದ್ದರಿಂದ ಪಟ್ಟಣದಲ್ಲಿ ಅಯ್ಯಪ್ಪ ಮಂದಿರದಲ್ಲಿ ಮಾಲಧಾರಿಗಳೊಂದಿಗೆ ಸೇರಿ ಅಯ್ಯಪ್ಪ ಮಂತ್ರವನ್ನು ಪಠಿಸಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದಾರೆ.










