ಕೊಟ್ಟಿಗೆಹಾರ : ಪ್ರತಿಭೆಗಳು ಪ್ರೋತ್ಸಾಹದ ಕೊರತೆಯಿಂದ ಕಮರಿ ಹೋಗಬಾರದು. ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕಿದೆ ಎಂದು ಸಹಿಪ್ರಾ ಶಾಲೆ ಕಾಸರಗೋಡು ಸಿನಿಮಾ ಖ್ಯಾತಿಯ ನಿರ್ಮಾಪಕ ರವಿ ರೈ ಹೇಳಿದರು.
ಬಣಕಲ್ ಗ್ರಾ.ಪಂ ಸಭಾಂಗಣದಲ್ಲಿ ನಡೆದ ನವೀನ್ ಆನೆದಿಬ್ಬ ನಿರ್ದೇಶನದ ವಿಟಮಿನ್ ಎಂ ಕಿರುಚಿತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕಿರುಚಿತ್ರವನ್ನು ನಿರ್ಮಿಸುವವರು ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡದೇ ಇಂತಹ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಿದರೆ ಕಿರುಚಿತ್ರದ ನಿರ್ಮಾಣಕ್ಕೆ ಶ್ರಮಿಸಿದ ತಂತ್ರಜ್ಞರು, ಕಲಾವಿದರು, ಚಿತ್ರಕತೆ, ಸಂಭಾಷಣೆ ಬರೆದವರು ಎಲ್ಲರನ್ನು ಗುರುತಿಸಲು ಸಾಧ್ಯವಾಗುತ್ತದೆ. ಕಿರುಚಿತ್ರದಲ್ಲಿನ ಸರಿ ತಪ್ಪುಗಳನ್ನು ವಿಮರ್ಶಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ. ಮಾನವೀಯತೆಯ ಮಹತ್ವ ಸಾರುವ ಈ ಕಿರುಚಿತ್ರ ಮಾನವೀಯತೆಯ ಅಗತ್ಯತೆಯನ್ನು ಸಾರಿದೆ ಎಂದರು.
ವಿಟಮಿನ್ ಎಂ ಕಿರುಚಿತ್ರದ ನಿರ್ದೇಶಕ ನವೀನ್ ಆನೆದಿಬ್ಬ ಮಾತನಾಡಿ ಸಮಾನ ಮನಸ್ಕರು ಒಂದೆಡೆ ಸೇರಿ ನಿರ್ಮಿಸಿದ ಕಿರುಚಿತ್ರವಿದು. ನಂದೀಶ್ ಬಂಕೇನಹಳ್ಳಿ ಅವರ ಕಥೆ ಆಧಾರಿಸಿ ಈ ಕಿರುಚಿತ್ರವನ್ನು ನಿರ್ಮಿಸಿದ್ದು ಮುಖ್ಯ ಪಾತ್ರದಲ್ಲಿ ಅಬ್ದುಲ್ ನಾಜೀಮ್ ಹಾಗೂ ಮಲೆನಾಡು ಭಾಗದ ಸಹಕಲಾವಿದರು ಅಭಿನಯಿಸಿದ್ದಾರೆ ಎಂದರು.
ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಮಲೆನಾಡು ಭಾಗದ ಕಲಾವಿದರು ಅವಕಾಶ ಸಿಗದೇ ಹಿನ್ನೆಲೆಗೆ ಸರಿಯುತ್ತಿದ್ದಾರೆ. ಅವಕಾಶ ವಂಚಿತ ಕಲಾವಿದರಿಗೆ ವೇದಿಕೆ ಕಲ್ಪಿಸುವ ಮೂಲಕ ಅಂತಹ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಿದೆ ಎಂದರು.
ರಾಜ್ಯ ಪಶು ಸಂಗೋಪನಾ ಮತ್ತು ಮೀನುಗಾರಿಕಾ ವಿಶ್ವವಿದ್ಯಾಲಯದ ನಿದೇರ್ಶಕ ದೀಪಕ್ ದೊಡ್ಡಯ್ಯ ಮಾತನಾಡಿ ಆರ್ಥಿಕ ಸಂಕಷ್ಟದ ನಡುವೆಯೂ ತನಗೆ ಅಚಾನಕ್ಕಾಗಿ ಸಿಕ್ಕ ಯಾರದೋ ಹಣವನ್ನು ಪ್ರಮಾಣಿಕವಾಗಿ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆವ ಕಥಾಹಂದರ ಹೊಂದಿರುವ ಈ ಚಿತ್ರ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತದೆ. ಮಲೆನಾಡಿನ ಯುವತಂಡದ ಈ ಪ್ರಯತ್ನ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಕಸಾಪ ಅಧ್ಯಕ್ಷ ವಸಂತ್ ಹಾರ್ಗೋಡು, ತಾಲ್ಲೂಕು ಕಾಯದರ್ಶಿ ಲಕ್ಷ್ಮಣಗೌಡ, ಕೊಟ್ಟಿಗೆಹಾರ ವರ್ತಕರ ಸಂಘದ ಕಾರ್ಯದರ್ಶಿ ವೇಣುಗೋಪಾಲ್ ಪೈ, ಗೆಳೆಯರ ಬಳದ ಉಪಾಧ್ಯಕ್ಷ ಸಂಜಯಗೌಡ, ಸಮಾಜ ಸೇವಕ ಆರೀಪ್, ಕಲಾವಿದರಾದ ಅಬ್ದುಲ್ ನಾಜೀಮ್, ಅಭಿಜಿತ್, ವಿಜಯಲಕ್ಷ್ಮಿ, ಪರಮೇಶ್, ಕಸಾಪ ಪಧಾಧಿಕಾರಿಗಳಾದ ಭಕ್ತೇಶ್, ನಂದೀಶ್ ಬಂಕೇನಹಳ್ಳಿ, ಸಂತೋಷ್ ಅತ್ತಿಗೆರೆ, ಜಯಪಾಲ್, ಅಭಿ, ವೆಂಕಟೇಶ್, ಸುನಿಲ್, ಶಶಿ, ಕಾರ್ತಿಕ್, ಪ್ರಜ್ವಾ, ಅನ್ವಿತ್ ಮುಂತಾದವರು ಇದ್ದರು.










