ಮೂಡಿಗೆರೆ : ಭಾರಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಳಿಕ ತಾಲ್ಲೂಕಿನಲ್ಲಿ ಮಾತನಾಡಿದ ಅವರು, ಇಲ್ಲಿನ ಪರಿಸ್ಥಿತಿ ನೋಡಿದಾಗ ನನ್ನ ಮನಸ್ಸು ಕರಗಿ ಹೋಯಿತು. ಈ ಭಾಗದ ಜನರ ಭವಿಷ್ಯದ ಬಗ್ಗೆ ನನಗೆ ಪ್ರಶ್ನೆ ಮೂಡುತ್ತಿದೆ. ಇದಕ್ಕೆ ಸರ್ಕಾರ ತ್ವರಿತಗತಿಯಲ್ಲಿ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಉಂಟಾಗಿರುವ ಪ್ರವಾಹದ ಬಗ್ಗೆ ಕೇಂದ್ರ ಸರ್ಕಾರ ಇಲ್ಲಿಯವರೆಗೂ ಗಮನ ಹರಿಸದೇ ಇರುವುದು ನೋವಿನ ಸಂಗತಿ. ಕೂಡಲೇ ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು. ಈ ರೀತಿಯ ಸಮಸ್ಯೆಗಳಿಗೆ ರಾಜ್ಯ ಸರ್ಕಾರ ಪರಿಹಾರ ಕೊಡುವುದಕ್ಕೆ ಆಗುವುದಿಲ್ಲ. ಕೇಂದ್ರ ಮಂತ್ರಿಗಳು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು. ಆದರೆ ಕೇಂದ್ರದ ಗಮನಕ್ಕೆ ತರುವಲ್ಲಿ ಬಿಜೆಪಿ ನಾಯಕರು ವಿಫಲರಾಗಿದ್ದಾರೆ. ಈಗಾಗಲೇ ಹತ್ತು ದಿನಗಳು ಕಳೆದು ಹೋಗಿದೆ. ಹಾಗಿದ್ದರೂ ಕೇಂದ್ರ ಸರ್ಕಾರ ಪ್ರವಾಹದ ಬಗ್ಗೆ ಇಚ್ಛಾಶಕ್ತಿಯನ್ನು ತೋರುತ್ತಿಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೈಯಲ್ಲಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅವರೊಬ್ಬರೇ ಎಲ್ಲಾ ಸ್ಥಳಗಳಿಗೂ ಭೇಟಿ ನೀಡುತ್ತಿದ್ದಾರೆ. ಪ್ರವಾಹ ಹಾಗೂ ಸಚಿವ ಸಂಪುಟ ಎಂದು ಒಬ್ಬೊಬ್ಬರೇ ಓಡಾಡುತ್ತಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರಿಗೂ ಕೂಡಾ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಕಾಣಿಸುತ್ತಿದೆ. ಈ ವಿಚಾರದಲ್ಲಿ ಯಾರೂ ರಾಜಾಕೀಯ ಮಾಡಬಾರದು ಎಂದು ಹೇಳಿದರು.










