ಬೆಂಗಳೂರು : ಮೇ 16ರಿಂದ ಶಾಲೆಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಶಾಲಾ ಆರಂಭದ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸಹ ಸ್ಪಷ್ಟಪಡಿಸಿದ್ದಾರೆ. ಆದರೆ ಸರ್ಕಾರದ ಈ ನಡೆಗೆ ಕೆಲ ಪೋಷಕರು ಅಸಮಾಧಾನ ಹೊರ ಹಾಕಿದ್ದಾರೆ.
ಈ ವರ್ಷ 15 ದಿನಕ್ಕೂ ಮೊದಲೇ ತರಾತುರಿಯಲ್ಲಿ ಶಾಲೆ ಓಪನ್ ಏಕೆ ಎಂದು ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಮೇ 16ರಿಂದಲೇ ಶಾಲೆ ಆರಂಭವಾದ್ರೂ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ಸರ್ಕಾರ ಖಾಸಗಿ ಶಾಲೆಗಳ ಲಾಬಿಗೆ ಮಣಿಯುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಶುಲ್ಕ, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್ ಡೌನ್ ಮಾಡ್ತಾರೆ. ಲಾಕ್ ಡೌನ್ ಆಯ್ತು ಅಂತ ಆನ್ ಲೈನ್ ಕ್ಲಾಸ್ ಮಾಡ್ತಾರೆ ಇದೆಲ್ಲ ದೊಡ್ಡ ಹುನ್ನಾರ ಅಂತ ಪೋಷಕರು ಗರಂ ಆಗಿದ್ದಾರೆ.
ಜೂನ್, ಜುಲೈನಲ್ಲಿ ಕೊರೊನಾ 4ನೇ ಅಲೆ ಅಪ್ಪಳಿಸುವ ಸಾಧ್ಯತೆಗಳಿವೆ ನೀವೇ ಹೇಳುತ್ತಿದ್ದೀರಿ. ಹಾಗಾಗಿ ಜೂನ್ ತಿಂಗಳು ಕಾದು ನೋಡಿ, ಬಳಿಕ ಶಾಲೆ ಆರಂಭಿಸಲು ಮುಂದಾಗಬೇಕು ಎಂದು ಸರ್ಕಾರ ಹಾಗೂ ಶಿಕ್ಷಣ ಇಲಾಖೆಗೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ.
2019-20, 2020-21 ಮತ್ತು 2021-22ನೇ ಸಾಲಿನಲ್ಲಿ ಕೇವಲ ಶೇ.50 ರಿಂದ 60 ರಷ್ಟು ಮಾತ್ರ ಭೌತಿಕ ಕಲಿಕೆ ಆಗಿದೆ. ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆಯೇ ಆಗಿಲ್ಲ. ಹೀಗಾಗಿ ರಾಜ್ಯದ ಎಲ್ಲ ಶಾಲೆಗಳಿಗೂ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಿದೆ. ಭೌತಿಕ ತರಗತಿ ಬದಲಿಗೆ ಆನ್ ಲೈನ್ ಮೂಲಕ ಶಿಕ್ಷಣ ನೀಡಲಾಗಿತ್ತು. ಆದ್ರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನ ತಲುಪಿಲ್ಲ. ಈ ವರ್ಷದಿಂದಾದ್ರೂ ಪರಿಣಾಮಕಾರಿಯಾಗಿ ಶಿಕ್ಷಣ ನೀಡುವ ನಿಟ್ಟಿನಲ್ಲಿ 15 ದಿನ ಬೇಗನೇ ಶಾಲೆ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ ಎಂದು ಶಿಕ್ಷಣ ಇಲಾಖೆ ಉತ್ತರ ನೀಡಿದೆ.










