ಮೈಸೂರು : ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ವಂಚಿಸಿದ್ದ ಇಬ್ಬರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೈಸೂರಿನ ಚಂದ್ರಗೌಡ.ಎಸ್.ಪಾಟೀಲ್ (44) ಹಾಗೂ ಗದಗ ಮೂಲದ ರೈಲ್ವೆ ಇಲಾಖೆಯ ನಿವೃತ್ತ ನೌಕರ ಶಿವಸ್ವಾಮಿ (62) ಎಂದು ಗುರುತಿಸಲಾಗಿದೆ. ಮೈಸೂರು ರೈಲ್ವೆ ವಿಭಾಗದಲ್ಲಿ ಕೆಲಸ ಕೊಡಿಸುತ್ತೇವೆ ಎಂದು ಹೇಳಿ ನಕಲಿ ನೇಮಕಾತಿ ಆದೇಶಗಳನ್ನು ನೀಡುತ್ತಿದ್ದರು. ಇವರು ಸುಮಾರು 400 ಅಭ್ಯರ್ಥಿಗಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 22 ಕೋಟಿ ರೂ. ಹಣ ಪಡೆದು ವಂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಿಂದ 221 ಸಹಿ ಮಾಡಿದ ಖಾಲಿ ಚೆಕ್, ಚೆಕ್ ಪುಸ್ತಕ, ಅಭ್ಯರ್ಥಿಗಳ ಮೂಲ ದಾಖಲೆ, ಸುಮಾರು 100 ನಕಲಿ ರೈಲ್ವೆ ನೇಮಕಾತಿ ಆದೇಶಗಳು, 70 ಟಿಟಿಯಿಗಳ ನಕಲಿ ನಾಮಫಲಕಗಳು, ಒಂದು ಲ್ಯಾಪ್ ಟಾಪ್, ಒಂದು ಕಂಪ್ಯೂಟರ್ ಸೇರಿದಂತೆ 4.15 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ರೈಲ್ವೆ ಆವರಣದಲ್ಲಿರುವ ಆಸ್ಪತ್ರೆಯ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರು. ಈ ಬಗ್ಗೆ ಮೈಸೂರಿನ ಮುಖ್ಯ ವೈದ್ಯಕೀಯ ಅಧೀಕ್ಷಕರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ರೈಲ್ವೆ ಭದ್ರತಾ ವಿಭಾಗದ ಆಯುಕ್ತರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ರೈಲ್ವೆ ಭದ್ರತಾ ಪಡೆಯ ಸಿಬ್ಬಂದಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ಯ ಈ ಇಬ್ಬರು ಆರೋಪಿಗಳನ್ನು ಮೈಸೂರಿನ ಮಂಡಿಮೊಹಲ್ಲಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಈ ಸಂಬಂಧ ಮಂಡಿಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.