ಲೈವ್ ಟಿವಿ ಕಾರ್ಯಕ್ರಮದ ವೇಳೆ ಕುಸಿದುಬಿದ್ದು ಕೃಷಿ ತಜ್ಞ ಸಾವು…

43
firstsuddi

ತಿರುವನಂತಪುರಂ: ದೂರದರ್ಶನ ಟಿವಿ ವಾಹಿನಿಯಲ್ಲಿ ನಡೆಯುತ್ತಿದ್ದ ಲೈವ್ ಟೆಲಿಕಾಸ್ಟ್ ಕಾರ್ಯಕ್ರಮದಲ್ಲೇ ಕುಸಿದು ಬಿದ್ದು ಕೃಷಿ ತಜ್ಞರೊಬ್ಬರು ನಿನ್ನೆ ಸಾವನ್ನಪ್ಪಿದ್ದಾರೆ.

ಡಾ.ಅನಿ ಎಸ್ ದಾಸ್ (59) ಮೃತರು. ಕೇರಳ ಕೃಷಿ ವಿಶ್ವವಿದ್ಯಾಲಯದ ಯೋಜನಾ ನಿರ್ದೇಶಕರಾಗಿರುವ ದಾಸ್ ಕೃಷಿ ತಜ್ಞರಾಗಿದ್ದರು.

ಕೃಷಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾಹಿತಿ ನೀಡಲು ದೂರದರ್ಶನದಲ್ಲಿ ನಡೆಯುತ್ತಿದ್ದ ಚರ್ಚಾ ಕಾರ್ಯಕ್ರಮಗಳಲ್ಲಿ ಆಗಾಗ ಭಾಗವಹಿಸುತ್ತಿದ್ದರು. ನಿನ್ನೆ ಕೂಡ ದೂರದರ್ಶನದಲ್ಲಿ ಸಂಜೆ 6.30ಕ್ಕೆ ನಡೆಯುವ ಕೃಷಿ ದರ್ಶನ ಕಾರ್ಯಕ್ರಮದಲ್ಲಿ ಇವರು ಭಾಗವಹಿಸಿದ್ದರು. ಈ ಕಾರ್ಯಕ್ರಮ ಲೈವ್ ಟೆಲಿಕಾಸ್ಟ್ ಆಗುತ್ತಿತ್ತು. ಈ ವೇಳೆ ಇವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ದಾಸ್ ಅವರು ಕೇರಳ ಫೀಡ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು ಮತ್ತು ಕೇರಳ ಕೃಷಿ ವಿಶ್ವವಿದ್ಯಾಲಯದಲ್ಲಿ ಸಂವಹನ ಕೇಂದ್ರದ ಮುಖ್ಯಸ್ಥರಾಗಿದ್ದರು.