ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಅಟ್ಟಹಾಸ ಮೆರೆದ ಪುಂಡರು.. ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ…

78
firstsuddi

ಬೆಳಗಾವಿ : ನಗರದ ಅನಗೋಳದ ಕನಕದಾಸ ಕಾಲೋನಿಯಲ್ಲಿ ಕೆಲ ಪುಂಡರು ಸಂಗೊಳ್ಳಿ ರಾಯಣ್ಣ ಪುತ್ಥಳಿಯನ್ನು ಹಾನಿಗೊಳಿಸಿರುವ ಘಟನೆ ತಡರಾತ್ರಿ ನಡೆದಿದೆ.

ನಸುಕಿಜಾವ 3 ಗಂಟೆ ಸುಮಾರಿಗೆ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಅಷ್ಟೇ ಅಲ್ಲದೇ ಸಂಗೊಳ್ಳಿ ರಾಯಣ್ಣ ಪುತ್ಥಳಿ ಹಾನಿಗೊಳಿಸಿ ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ಖಡ್ಗ, ಗುರಾಣಿ ಬೇರೆ ಬೇರೆ ಕಡೆ ಇಟ್ಟು ವಿಕೃತಿಗೊಳಿಸಿ ದುಷ್ಕೃತ್ಯವೆಸಗಿದ್ದಾರೆ. ಇದೀಗ ಸ್ಥಳಕ್ಕೆ ಟೀಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಸಂಗೊಳ್ಳಿ ರಾಯಣ್ಣನ ಪುತ್ಥಳಿ ಕೆಡವಿ ಪುಂಡರು ಅಟ್ಟಹಾಸ ಮೆರೆದಿರುವುದನ್ನು ಖಂಡಿಸಿ ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ನಗರದ ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸುತ್ತಿರುವ ಕನ್ನಡಪರ ಹೋರಾಟಗಾರರು, ಕೂಡಲೇ ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸುತ್ತಿದ್ದಾರೆ.

ಮತ್ತೊಂದೆಡೆ ಬೆಂಗಳೂರಿನ ಶಿವಾಜಿ ನಗರದಲ್ಲಿರುವ ಶಿವಾಜಿ ಪುತ್ಥಳಿಗೆ ಕಪ್ಪು ಮಸಿ ಸುರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸಲಾಗಿದ್ದು, ಈ ವೇಳೆ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಹಿಂದೂಪರ ಸಂಘಟನೆಗಳು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎಂಇಎಸ್ ಪುಂಡರು ಸೇರಿಕೊಂಡು, ಕಲ್ಲು ತೂರಾಟ ನಡೆಸಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದ ಡ್ಯೂಟಿಗೆ ಬಂದಿರುವ ಸರ್ಕಾರಿ ವಾಹನಗಳ ಮೇಲೆ ಕಲ್ಲು ಎಸೆದು ಉದ್ಧಟತನ ಮೆರೆಯಲಾಗಿದೆ. ಲಾಡ್ಜ್ ಮುಂಭಾಗದಲ್ಲಿ ನಿಲ್ಲಿಸಿದ್ದ ಕರ್ನಾಟಕ ಸರ್ಕಾರದ ಕಾರುಗಳ ಮೇಲೆ ಕಲ್ಲು ತೂರಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಬಿಗುವಿನ ವಾತಾವರಣ ನಿರ್ಮಾಣಗೊಳ್ಳುತ್ತಿದ್ದಂತೆ ಪರಿಸ್ಥಿತಿ ನಿಯಂತ್ರಿಸಲು ಬೆಳಗಾವಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. 

ಬೆಳಗಾವಿ ಹೊರವಲಯದಲ್ಲಿ ಕೂಡ ಕೆಎಸ್ ಆರ್ ಟಿಸಿ ಬಸ್ ಮೇಲೆ ಕಿಡಿಕೇಡಿಗಳು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಓರ್ವ ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದುಕೊಂಡು ಬಸ್ ಗೆ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಸದ್ಯ ದುಷ್ಕರ್ಮಿಗಳ ಅಟ್ಟಹಾಸಕ್ಕೆ ನಲುಗಿ ಹೋಗಿರುವ ಬೆಳಗಾವಿ ನಗರದಲ್ಲಿ ಪೊಲೀಸ್ ಬಿಗಿ ಭದ್ರತೆಗೊಳಿಸಲಾಗಿದ್ದು, ನಾಳೆ ಬೆಳಗ್ಗೆ 8 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.