ಬೆಂಗಳೂರು: ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಅವರು ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನ್ನು ಕೊಂಡಾಡಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಜೆಟ್ 7 ಕೋಟಿ ಜನರ ಬಜೆಟ್ ಆಗಿದೆ. ನಾನು ಸಿಎಂ ಮತ್ತು ಡಿಸಿಎಂ ಅವರಿಗೆ ಅಭಿನಂದನೆ ತಿಳಿಸುತ್ತೇನೆ. ಬೆಂಗಳೂರಿನ ಬಗ್ಗೆ ಮಾತ್ರ ನಾನು ಮಾತನಾಡುತ್ತೇನೆ. ನನ್ನ ಕ್ಷೇತ್ರದ ವ್ಯಾಪ್ತಿಯಲ್ಲಿ 5 ಕಸದ ಘಟಕಗಳು ಇದ್ದವು. ಅವುಗಳನ್ನ ಹೊರಗೆ ಹಾಕುವ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಜನರ ಸಂಕಷ್ಟ ನಿವಾರಣೆಗೆ ಸಿಎಂ ಕ್ರಮ ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
110 ಹಳ್ಳಿಗಳಿಗೆ ಕಾವೇರಿ ನೀರಿನ ಸೌಲಭ್ಯ ಮಾಡುವ ಭರವಸೆ ನೀಡಿದ್ದಾರೆ. ಕುಡಿಯುವ ನೀರು, ಕಸ ವಿಲೇವಾರಿ, ಟ್ರಾಫಿಕ್, ವೈಟ್ ಟ್ಯಾಪಿಂಗ್, ಫ್ಲೈ ಓವರ್ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದಾರೆ. ಇನ್ನು ಪೂರ್ಣ ಪ್ರಮಾಣದ ಬಜೆಟ್ ನೋಡಿಲ್ಲ. ಬಜೆಟ್ ವಿರೋಧ ಮಾಡುವವರಿಗೆ ನಾನು ಏನೂ ಹೇಳುವುದಿಲ್ಲ. ಟೀಕೆ ಮಾಡುವುದು ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ ಎಂದರು.
ಎಲ್ಲಾ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಿದ್ದರಾಮಯ್ಯನವರ ಬಜೆಟ್ ಅನ್ನು ಟೀಕಿಸುತ್ತಿರುವಾಗ ಸೋಮಶೇಖರ್ ಮಾತ್ರ ಅಭಿನಂದನೆ ತಿಳಿಸಿದ್ದು, ಅಚ್ಚರಿಗೆ ಕಾರಣವಾಗಿದೆ.










