2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್.

62
firstsuddi

ಬೆಳಗಾವಿ : ಜಮೀನು ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಿತ್ತೂರು ತಹಶೀಲ್ದಾರ್ ಮತ್ತು ಕೇಸ್ ವರ್ಕರ್ 2 ಲಕ್ಷ ರೂ. ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಜಿಲ್ಲೆಯ ಕಿತ್ತೂರು ತಹಶೀಲ್ದಾರ್ ಸೋಮಲಿಂಗಪ್ಪ ಹಲಗಿ ಹಾಗೂ ಕೇಸ್ ವರ್ಕರ್ ಪ್ರಸನ್ನ ಜಿ ಲೋಕಾಯುಕ್ತ ಬಲೆಗೆ ಬಿದ್ದವರು.

ಕಿತ್ತೂರು ತಾಲೂಕಿನ ಖೊದಾನಪೂರ ಗ್ರಾಮದ ಬಾಪುಸಾಹೇಬ ಇನಾಮದಾರ ಎಂಬುವವರು ತಮ್ಮ 10 ಎಕರೆ ಜಮೀನಿನ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕಿತ್ತೂರು ತಹಶೀಲ್ದಾರ್ 5 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬಾಪುಸಾಹೇಬ ಪುತ್ರ ರಾಜೇಂದ್ರ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ಸಲ್ಲಿಸಿದರು.

ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಕಿತ್ತೂರು ತಹಶೀಲ್ದಾರ್ ಮನೆಯಲ್ಲಿಯೇ ಜಮೀನಿನ ಖಾತೆ ಬದಲಾವಣೆ ಮಾಡಲು 2 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ದಾಳಿ ಮಾಡಿದ್ದಾರೆ. ಎರಡು ಲಕ್ಷ ಹಣ ಮತ್ತು ಶ್ಯೂರಿಟಿಗಾಗಿ 20 ಲಕ್ಷ ಮೌಲ್ಯದ ಖಾಲಿ ಚೆಕ್ ಅನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಬೆಳಗಾವಿ ಎಸ್ಪಿ ಯಶೋಧಾ ವಂಟಗೂಡಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಅಪೂರ್ಣ ಹುಲಗೂರ ತಂಡದ ಸಿಬ್ಬಂದಿ ಭಾಗಿಯಾಗಿದ್ದರು.