ಬೆಂಗಳೂರು : 2022-23ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ಕೋವಿಡ್ ಸೋಂಕಿನಿಂದಾಗಿ ಮಕ್ಕಳ ಕಲಿಕೆ ಪೂರ್ಣ ಪ್ರಮಾಣದಲ್ಲಿ ನಡೆದಿರಲಿಲ್ಲ. ಹೀಗಾಗಿ ಎಲ್ಲಾ ಶಾಲೆಗಳು ಈ ಮಾರ್ಗಸೂಚಿ ಅನುಸರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆ ಪ್ರಕಟಿಸಿದೆ.
ಸದ್ಯ ಮಕ್ಕಳಿಗೆ ಬೇಸಿಗೆ ರಜೆ ನಡೆಯುತ್ತಿದ್ದು, ಈ ಬೇಸಿಗೆ ರಜೆ ಮೇ 15ರಂದು ಮುಗಿಯಲಿದ್ದು, ಮೇ 16ರಂದು ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಮತ್ತೆ ಪ್ರಾರಂಭವಾಗಲಿದೆ. ಮೇ 16ರಂದು ಆರಂಭವಾಗುವ ತರಗತಿಗಳು ಅಕ್ಟೋಬರ್ 2ರವರೆಗೆ ನಡೆಯಲಿದೆ. ಇದು ಮೊದಲ ಅವಧಿ. ಎರಡನೇ ಅವಧಿ ಅಕ್ಟೋಬರ್ 17 ರಿಂದು ಏಪ್ರಿಲ್ 10. 2023ರವರೆಗೆ ನಡೆಯಲಿದೆ. ಇನ್ನು 2023 ಏಪ್ರಿಲ್ 11 ರಿಂದ ಮೇ. 28ರವರಗೆ ಬೇಸಿಗೆ ರಜೆ ಆರಂಭವಾಗಲಿದೆ ಎಂದು ಸುತ್ತೋಲೆಯಲ್ಲಿ ತಿಳಿಸಿದೆ.
ಕಳೆದ ಮೂರು ವರ್ಷಗಳಿಂದ ಮಕ್ಕಳ ಕಲಿಕೆಯಲ್ಲಿ ನಿರೀಕ್ಷಿತ ಮಟ್ಟದ ಕಲಿಕಾ ಪ್ರಗತಿ ಉಂಟಾಗಿಲ್ಲ. ಕೇವಲ ಶೇ. 50- 60 ಮಕ್ಕಳಿಗೆ ಮಾತ್ರ ಭೌತಿಕ ಕಲಿಕೆ ನೀಡಲಾಗಿದ್ದು, ಪೂರ್ಣ ಪ್ರಮಾಣದ ಕಲಿಕೆ ಆಗಿಲ್ಲ. ಈ ಹಿನ್ನಲೆ ಈ ಶೈಕ್ಷಣಿಕ ವರ್ಷವನ್ನು ಪೂರ್ಣ ಪ್ರಮಾಣಧಲ್ಲಿ ಬಳಸಿಕೊಳ್ಳುವುದರ ಮೂಲಕ ಕಲಿಕಾ ಚೇತರಿಕೆ ವರ್ಷವೆಂದು ಕಾರ್ಯಸೂಚಿಯಲ್ಲಿ ರೂಪಿಸಲಾಗಿದೆ.










