22 ಬ್ಯಾಂಕ್‌ಗಳಲ್ಲಿ ಹತ್ತು ಕೋಟಿ ಸಾಲ ಪಡೆದ ಪ್ರಕರಣ- ಆರು ಜನ ಅರೆಸ್ಟ್…

41
firstsuddi

ಬೆಂಗಳೂರು: ಒಂದೇ ಸ್ವತ್ತಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು 22 ಬ್ಯಾಂಕ್‌ಗಳಿಗೆ ಸಲ್ಲಿಸಿ 10 ಕೋಟಿಗೂ ಹೆಚ್ಚು ವಂಚನೆ ಮಾಡಿರುವ ಒಂದೇ ಕುಟುಂಬದ ಐವರ ಸಹಿತ ಒಟ್ಟು ಆರು ಜನ ಆರೋಪಿಗಳನ್ನು ಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಅಪಾರ್ಟ್ಮೆಂಟ್​​ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನಾಗೇಶ್, ಆತನ ಪತ್ನಿ ಸುಮಾ, ಪತ್ನಿಯ ಸಹೋದರಿ ಶೋಭಾ, ಆಕೆಯ ಪತಿ ಸತೀಶ್, ಸುಮಾಳ ಸ್ನೇಹಿತೆ ವೇದಾ ಸೇರಿದಂತೆ ಆರು ಜನರನ್ನು ಬಂಧಿಸಲಾಗಿದೆ.

ಆರೋಪಿಗಳು ನಾಗೇಶ್ – ಸುಮಾ ಹೆಸರಿನಲ್ಲಿ ಸಹಕಾರಿ ಬ್ಯಾಂಕ್, ರಾಷ್ಟೀಕೃತ ಬ್ಯಾಂಕ್, ಕೋ ಅಪರೇಟಿವ್ ಬ್ಯಾಂಕ್ ಸೇರಿ ಹಲವಾರು ಕಡೆಗಳಲ್ಲಿ ಬೇಗೂರಿನಲ್ಲಿ 2100 ಅಡಿ ವಿಸ್ತೀರ್ಣದಲ್ಲಿ ನಮ್ಮ ಕಟ್ಟಡ ಇದೆ ಎಂದು ನಂಬಿಸಿದ್ದರು. ಜೊತೆಗೆ ಅದಕ್ಕೆ ಬೇಕಾದ ದಾಖಲಾತಿಗಳನ್ನು ಕೂಡ ಸೃಷ್ಟಿಸಿ, ಅದನ್ನು ಕುಟುಂಬದ ಬೇರೆ ಬೇರೆ ವ್ಯಕ್ತಿಗಳ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದರು. ನಂತರ ಅದಕ್ಕೆ ಬೇಕಾದ ದಾಖಲಾತಿಗಳನ್ನು ನಕಲಿಯಾಗಿ ಸೃಷ್ಟಿಸಿಕೊಂಡು 2014 ರಿಂದ 2015ರ ಅವಧಿಯಲ್ಲಿ ವಂಚನೆ ಮಾಡಿದ್ದರು. ಅಷ್ಟೇ ಅಲ್ಲ, ಪಡೆದ ಲೋನ್ ಹಣದಲ್ಲಿ ಒಂದು ಸೈಟ್ ಕೂಡ ಪಡೆದುಕೊಂಡಿದ್ದರು. ಸದ್ಯ ಅದನ್ನು ಕೇಸ್​ನಲ್ಲಿ ಅಟ್ಯಾಚ್ ಮಾಡಲಾಗಿದೆ.

ಆರೋಪಿಗಳ ವಿರುದ್ಧ ಇದುವರೆಗೂ ಕೇವಲ ನಾಲ್ಕು ವಿವಿಧ ಬ್ಯಾಂಕ್ ಪ್ರತಿನಿಧಿಗಳು ಮಾತ್ರವೇ ದೂರು ನೀಡಿದ್ದರು. ಜಯನಗರ 3ನೇ ಬ್ಲಾಕ್‌ನಲ್ಲಿರುವ ಕೋ-ಆಪರೇಟಿವ್ ಬ್ಯಾಂಕ್‌ವೊಂದರ ಮ್ಯಾನೇಜರ್ ನೀಡಿದ್ದ ದೂರಿನನ್ವಯ ಜಯನಗರ ಪೊಲೀಸ್ ಠಾಣೆಯಲ್ಲಿ 2022ರಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಆರೋಪಿಗಳು ನಾಪತ್ತೆಯಾಗಿದ್ದರು. ಸದ್ಯ ಆರೂ ಜನ ಆರೋಪಿತರನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.