5 ಮತ್ತು 8ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದುಗೊಳಿಸಿ ಹೈಕೋರ್ಟ್ ಆದೇಶ…

95
firstsuddi

ಬೆಂಗಳೂರು : ಮಾ.13 ರಿಂದ ಆರಂಭವಾಗಬೇಕಿದ್ದ 5 ಮತ್ತು 8ನೇ ತರಗತಿಯ ಬೋರ್ಡ್ ಪರೀಕ್ಷೆ ರದ್ದುಪಡಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

ನಿಯಮಗಳಿಗನುಸಾರ ಮುಂದಿನ ಶೈಕ್ಷಣಿಕ ವರ್ಷದಿಂದ ಬೋರ್ಡ್ ಪರೀಕ್ಷೆ ನಡೆಸಬಹುದು ಎಂದು ಹೈಕೋರ್ಟ್ ನ್ಯಾ. ಪ್ರದೀಪ್ ಸಿಂಗ್ ಯೆರೂರ್ ಅವರ ನೇತೃತ್ವದ ಏಕಸದಸ್ಯ ಪೀಠವು ಸ್ಪಷ್ಟಪಡಿಸಿದೆ.

ಆದೇಶ ಈ ವರ್ಷಕ್ಕೆ ಮಾತ್ರ ಅನ್ವಯ. ಈ ವರ್ಷ ಮಾತ್ರ ಬೋರ್ಡ್ ಎಕ್ಸಾಂ ರದ್ದುಪಡಿಸಲಾಗಿದೆ. ಮುಂದಿನ ವರ್ಷ ಎಲ್ಲಾ ನಿಯಮಗಳನ್ನ ಪಾಲಿಸಿ. ಪೋಷಕರ ಅಭಿಪ್ರಾಯವನ್ನು ಪಡೆದು, ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಅಂತಿಮವಾಗಿ ನಿರ್ಧರಿಸಿ ಎಂದು ಶಿಕ್ಷಣ ಇಲಾಖೆಗೆ ಹೈಕೋರ್ಟ್ ಸೂಚನೆ ನೀಡಿದೆ.

2022-23ನೇ ಸಾಲಿನ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 12 ಡಿಸೆಂಬರ್ 2022 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ರುಪ್ಸಾ ತಕರಾರು ಅರ್ಜಿ ಸಲ್ಲಿಸಿತ್ತು.

5, 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸದಂತೆ ಕ್ರಮವಹಿಸಲು ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘದ (ರುಪ್ಸಾ) ಅಧ್ಯಕ್ಷರು ಮೇಲ್ಮನವಿ ಸಲ್ಲಿಸಿದ್ದರು. ಫೆ.23 ರಂದು ವಿಚಾರಣೆ ನಡೆಸಿದ್ದ ಪೀಠವು ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಹೀಗಾಗಿ ವಿಭಾಗೀಯ ಪೀಠಕ್ಕೆ ರುಪ್ಸಾ ಮೇಲ್ಮನವಿ ಸಲ್ಲಿಸಿತ್ತು.