ಹಾಸನ : ನವಜಾತ ಶಿಶುಗಳ ಆರೈಕೆಗಾಗಿ ಇಲ್ಲಿನ ಹಾಸನ ವೈದ್ಯಕೀಯ ವಿಜ್ಞಾನಗಳ ಮತ್ತು ಬೋಧಕ ಆಸ್ಪತ್ರೆಯ (ಹಿಮ್ಸ್) ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದ ಹಾಸಿಗೆ ಸಾಮಥ್ರ್ಯವನ್ನು 50ಕ್ಕೆ ಹೆಚ್ಚಿಸಲು ಸಿದ್ಧತೆ ಭರದಿಂದ ಸಾಗಿದೆ. ಮಕ್ಕಳ ದಿನಾಚರಣೆ ಹಿನ್ನೆಲೆಯಲ್ಲಿ ನ. 14ರಂದು ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕವನ್ನು ಸಾಂಕೇತಿಕವಾಗಿ ಉದ್ಘಾಟಿಸುವ ಮೂಲಕ ‘ಮಕ್ಕಳ ದಿನಾಚರಣೆ’ ಕೊಡುಗೆಯಾಗಿ ನೀಡಲು ಜಿಲ್ಲಾಡಳಿತ ಹಾಗೂ ಹಿಮ್ಸ್ ನಿರ್ಧರಿಸಿದೆ.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಶುಕ್ರವಾರ ಸಂಜೆ ಹಿಮ್ಸ್‍ಗೆ ಭೇಟಿ ನೀಡಿ, ಸಿದ್ಧತೆಗಳ ಬಗ್ಗೆ ಪರಿಶೀಲಿಸಿದರು. ಹಿಮ್ಸ್ ನಿರ್ದೇಶಕ ಡಾ. ರವಿಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಂಕರ್, ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ್, ಪ್ರಸೂತಿ ವಿಭಾಗದ ಮುಖ್ಯಸ್ಥೆ ಡಾ. ಪ್ರೇಮಲತಾ ಹಾಜರಿದ್ದರು. ರೇಡಿಯೆಂಟ್ ವಾರ್ಮರ್, ನಿಯೋನಾಟಲ್ ವೆಂಟಿಲೇಟರ್, ಬಬ್ಬಲ್ ಸಿಪಿಎಪಿ, ಎಬಿಜಿ ಮೆಷಿನ್, ಸಿರಂಜ್ ಪಂಪ್ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಅಳವಡಿಕೆ ಸೇರಿದಂತೆ ಇನ್ನಿತರೆ ಎಲ್ಲಾ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ವೈದ್ಯಕೀಯ ಸೇವೆಗೆ ದೊರೆಯುವಂತೆ ವ್ಯವಸ್ಥೆ ಮಾಡಲು ರೋಹಿಣಿ ಸಿಂಧೂರಿ ಅವರು ತಿಳಿಸಿದರು.
ಹಿಮ್ಸ್‍ನ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಸ್ತುತ 20 ಹಾಸಿಗೆಗಳ ಸಾಮಥ್ರ್ಯವಿದ್ದು, ನವಜಾತ ಶಿಶುಗಳಿಗೆ ಮತ್ತಷ್ಟು ಉತ್ತಮ ವೈದ್ಯಕೀಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಘಟಕದಲ್ಲಿನ ಹಾಸಿಗೆ ಸಾಮಥ್ರ್ಯವನ್ನು 50ಕ್ಕೆ ಹೆಚ್ಚಿಸಲಾಗುತ್ತಿದೆ ಇದು ರಾಜ್ಯದಲ್ಲೇ ಅತೀ ಹೆಚ್ಚು ಹಾಸಿಗೆ ಸಾಮಥ್ರ್ಯವಿರುವ ನವಜಾತ ಶಿಶುಗಳ ತುರ್ತು ಚಿಕಿತ್ಸಾ ಘಟಕಗಳಲ್ಲಿ ಒಂದು ಎಂಬ ಹಿರಿಮೆಗೆ ಪಾತ್ರವಾಗಲಿದೆ. ಹಿಮ್ಸ್‍ನಲ್ಲಿ ಜನಿಸುವ ಹಾಗೂ ಹೊರಗಿನಿಂದ ಚಿಕಿತ್ಸೆಗಾಗಿ ಬರುವ ನವಜಾತ ಶಿಶುಗಳಿಗೆ ಪ್ರತ್ಯೇಕವಾಗಿ ವೈದ್ಯಕೀಯ ಸೇವೆ ಕಲ್ಪಿಸುವುದರ ಜೊತೆಗೆ ತಾಯಂದಿರು ಹಾಲುಣಿಸಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಉಸಿರಾಟ, ನಂಜು, ಶ್ವಾಸಕೋಶ ಮತ್ತು ಹೃದಯ ಸಂಬಂಧಿತ ತೊಂದರೆ, ಕಡಿಮೆ ತೂಕ, ಅವಧಿ ಪೂರ್ವ ಜನನ ಸೇರಿದಂತೆ ಇನ್ನಿತರೆ ಆರೋಗ್ಯ ಸಂಬಂಧಿತ ತೊಂದರೆಗಳು ಕಂಡುಬರುತ್ತಿದ್ದು, ನವಜಾತ ಶಿಶುಗಳ ಶುಶ್ರೂಷೆಗಾಗಿ ಹೆಚ್ಚಿನ ಒತ್ತು ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ), ನರ್ಸಿಂಗ್ ಸ್ಟಾಫ್ ಮತ್ತು ವೈದ್ಯಕೀಯ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಹಿಂದೂಸ್ತಾನ್ ಪೆಟ್ರೋ ಕೆಮಿಕಲ್ಸ್ ವತಿಯಿಂದ ರೂ. 50 ಲಕ್ಷ ವೆಚ್ಚದಲ್ಲಿ ವೈದ್ಯಕೀಯ ಯಂತ್ರೋಪಕರಣಗಳನ್ನು ಪಡೆಯುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಲಾಗುತ್ತಿದೆ ಎಂದು ಮಕ್ಕಳ ವಿಭಾಗದ ಮುಖ್ಯ ಡಾ. ಪ್ರಸನ್ನ ತಿಳಿಸಿದರು. ಡಾ. ಕುಮಾರ್, ಡಾ. ಮನುಪ್ರಕಾಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.