ಶ್ರೀರಾಮಸೇನೆಯಿಂದ ಚಿಕ್ಕಮಗಳೂರಲ್ಲಿ 13 ರಿಂದ ನಡೆಯುವ ದತ್ತಮಾಲಾ ಅಭಿಯಾನದ ಪೂರ್ವಭಾವಿ ಸಭೆ

482

ಚಿಕ್ಕಮಗಳೂರು : ಪ್ರತಿ ವರ್ಷದಂತೆ ಈ ಬಾರಿಯೂ ಇದೇ 13 ರಿಂದ ಆರಂಭವಾಗುವ ದತ್ತಮಾಲಾ ಕಾರ್ಯಕ್ರಮ ಹಮ್ಮಿಕೊಂಡಿರುವ ಸಂಬಂಧ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅವರು ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಇಂದು ನಡೆದ ಶ್ರೀರಾಮ ಸೇನೆ ಕಾರ್ಯಕರ್ತರ ದತ್ತಮಾಲಾ ಕಾರ್ಯಕ್ರಮದ ನಿಮಿತ್ತ ಏರ್ಪಡಿಸಲಾಗಿದ್ದ  ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.

ದತ್ತ ಪೀಠದಲ್ಲಿ ಹಿಂದು ಅರ್ಚಕರನ್ನು ನೇಮಿಸಿ ನಿತ್ಯ ಪೂಜೆಗೆ ಅವಕಾಶಮಾಡಿಕೊಡಬೇಕು ಎಂಬ ವಿವಿಧ ಬೇಡಿಕೆಗಳನ್ನು ಸಂಘಟನೆಯವರು ಸಲ್ಲಿಸಿದ್ದು, ಅವುಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗಿದ್ದು, ಸರ್ಕಾರದಿಂದ ಸೂಕ್ತ ನಿರ್ದೇಶನ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು. ಸ್ವಾಮೀಜಿಗಳು ಹಾಗೂ ನಾಗ ಸಂತರು ದತ್ತಮಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಾದುಕೆ ದರ್ಶನಕ್ಕೆ ಅವಕಾಶ ಕಲ್ಪಿಸಲು ಮುಂಚೆಯೇ ಅವರ ಹೆಸರುಗಳನ್ನು ತಿಳಿಸಬೇಕು. ಆಧ್ಯತೆ ಮೇಲೆ ಸ್ವಾಮೀಜಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೇ, ಬೇರೆ ಬೇರೆಕಡೆಗಳಿಂದ ಬರುವ ಭಕ್ತಾಧಿಗಳಿಗೆ ಮಿನಿ ಬಸ್ಸಿನಲ್ಲಿ ಬರುವಂತೆ ಸಂಘಟಿಕರು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕಿನ ಖಾಸಗಿ ಹೋಂಸ್ಟೇಗಳಲ್ಲಿ ಪ್ರವಾಸಿಗರನ್ನು ತಂಗಲು ಈ ಅವಧಿಯಲ್ಲಿ ಅವಕಾಶ ಕಲ್ಪಿಸದಿರಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಉಪವಿಭಾಗಾಧಿಕಾರಿ ಸಂಗಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here