ಕನ್ಯಾಕುಮಾರಿ (ತಮಿಳುನಾಡು): ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ತಡೆಗಾಗಿ ‘ಪತ್ರಕರ್ತರ ರಕ್ಷಣಾ ಕಾಯಿದೆ’ಯನ್ನು ರೂಪಿಸಬೇಕು ಹಾಗೂ ಪತ್ರಕರ್ತರಿಗೆ ಸಿಗಬೇಕಾದ ಸೂಕ್ತ ಸೌಲಭ್ಯಗಳು ದೇಶಾದ್ಯಂತ ಏಕ ರೀತಿ ಇರುವಂತೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರಬೇಕು ಎಂದು IFWJ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿದೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಕಾರ್ಯಕಾರಿ ಸಮಿತಿ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರ ಮಹಾಸಭೆಯಲ್ಲಿ ಅನೇಕ ವಿಷಯಗಳು ಧ್ವನಿಸಿದವು.ಪ್ರಸ್ತುತ ಪತ್ರಕರ್ತರಿಗೆ ಸಂಭಂದಿಸಿದಂತೆ ಚರ್ಚೆ ನಡೆಸಿದ ಪದಾಧಿಕಾರಿಗಳು ಇತ್ತಿಚೆಗೆ ಪತ್ರಕರ್ತರ ಮೇಲೆ ನಡೆಯುತಿರುವ ದೌರ್ಜನ್ಯಗಳ ಬಗ್ಗೆ ತೀವ್ರವಾಗಿ ಕಳವಳ ವ್ಯಕ್ತಪಡಿಸಿದರು.
ಅಂತೆಯೇ ಪತ್ರಕರ್ತರೂ ಸಹ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಸಶಕ್ತ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಲು ಕರೆ ನೀಡಲಾಯಿತು. ಇತ್ತಿಚಿನ ದಿನಗಳಲ್ಲಿ ಸಮಾಜ ಘಾತುಕ ಶಕ್ತಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಪತ್ರಿಕೆಗಳು ಹಾಗೂ ಪತ್ರಕರ್ತರ ಮೇಲೆ ದೌರ್ಜನ್ಯ ಎಸಗುವುದನ್ನು ತಡೆಯುವ ಸಲುವಾಗಿ ಪತ್ರಕರ್ತರ ರಕ್ಷಣಾ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತರಬೇಕೆಂದು ಸಭೆಯಲ್ಲಿ ಒಕ್ಕೊರಲಿನಿಂದ ಆಗ್ರಹಿಸಲಾಯಿತು.
ಈ ಕಾಯ್ದೆ ಜಾರಿಗೆ ಬಂದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ದಲಿತರಿಗೆ ಸಿಗುವಂತ ಸೂಕ್ತ ಕಾನೂನು ರಕ್ಷಣೆ ಹಾಗೂ ದೌರ್ಜನ್ಯ ಎಸಗಿದವರ ವಿರುದ್ಧ ತ್ವರಿತ ಹಾಗೂ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವ ಶಾಸನ ಬದ್ದ ಅಧಿಕಾರ ಸಕ್ರಮ ಪ್ರಾಧಿಕಾರಗಳಿಗೆದೊರೆಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.ದೇಶದ ೨೫ಕ್ಕೂ ಹೆಚ್ಚು ರಾಜ್ಯಗಳ ಪತ್ರಿಕಾ ಸಂಘಟನೆಗಳ ಪದಾಧಿಕಾರಿಗಳು ಹಾಜರಿದ್ದು ಪತ್ರಕರ್ತರ ವಿವಿಧ ಸಮಸ್ಯೆಗಳ ಬಗ್ಗೆ ವಿಸ್ಕೃತವಾಗಿ ಚರ್ಚಿಸಿದರು.
ಕರ್ನಾಟಕದಲ್ಲಿ ಸಭೆ:ಪ್ರತಿ ವರ್ಷವೂ ಕನಿಷ್ಠ ನಾಲ್ಕು ಬಾರಿಯಾದರೂ ರಾಷ್ಟ್ರೀಯ ಮಂಡಳಿ ಸದಸ್ಯರ ಸಭೆ ಕರೆದು ಚರ್ಚೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.ಅಂತೆಯೇ ಮುಂದಿನ ವರ್ಷ ಫೆಬ್ರವರಿ ಕೊನೆಯ ವಾರದಲ್ಲಿ ಕರ್ನಾಟಕದಲ್ಲಿ ರಾಷ್ಟ್ರೀಯ ಮಂಡಳಿ ಸದಸ್ಯರ ಸಭೆ ಜರುಗಲಿದ್ದು ಅಲ್ಲಿ ಕರ್ನಾಟಕದ ಪತ್ರಿಕೆಗಳು ಮತ್ತು ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕಾಗಿ ಹೆಚ್ಚಿನ ಒತ್ತು ನೀಡಲಾಗುವುದು ಎಂದು IFWJರಾಷ್ಟ್ರೀಯ ಅಧ್ಯಕ್ಷರಾದ ಕೆ. ವಿಕ್ರಮ್ ರಾವ್ ತಿಳಿಸಿದರು.
ಸಭೆಯಲ್ಲಿ ಕರ್ನಾಟಕ, ತಮಿಳುನಾಡು,ಕೇರಳ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ ರಾಜ್ಯಗಳ ವಿವಿಧ ಸಮಸ್ಯೆಗಳು ಪ್ರಮುಖವಾಗಿ ಚರ್ಚೆಯಾದವು.ಕರ್ನಾಟಕ ಜರ್ನಲಿಸ್ಟ್ ಯೂನಿಯ್ ಅಧ್ಯಕ್ಷರಾದ ಡಾ ಬಿ. ನಾರಾಯಣ್, ಮಹಿಳಾ ಸಂಘಟನೆಯ ಸಂಚಾಲಕರಾದ ಶಾಂತಕುಮಾರಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಕರ್ನಾಟಕ ರಾಜ್ಯದ ನಿಯೋಜಿತ ಕಾರ್ಯದರ್ಶಿ ಕಲಾವಿದ ವಿಷ್ಣು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು, ಚಿಕ್ಕಮಗಳೂರು ಹಿರಿಯ ಪತ್ರಕರ್ತ ಜಯಕುಮಾರ್, ಕರ್ನಾಟಕದಿಂದ ತೆರಳಿದ್ದ ಮಿಂಚು ಶ್ರೀನಿವಾಸ್, ಮಾಲತೇಶ್ ಅರಸ್, ಸುದೀಶ್ ಸುವರ್ಣ, ಮಲ್ನಾಡ್ ಟಿ ವಿ ಸಂದೇಶ್, ಸಿಟಿ ಸಮಾಚಾರ್ ಪತ್ರಿಕೆ ಕೆ ಹರೀಶ್, ಸೇರಿದಂತೆ ಅನೇಕರು ಭಾಗವಹಿಸಿದ್ದರು. ಮತ್ತು ದೇಶದ ಆರು ನೂರಕ್ಕೂ ಅಧಿಕ ಪತ್ರಕರ್ತರು ಹಾಜರಿದ್ದರು.










