ಕಳಸ:ಮಲೆನಾಡಿನ ಜನರ ನಿದ್ದೆಕೆಡಿಸಿರುವ ಕಸ್ತೂರಿ ರಂಗನ್ ಜಾರಿ ವಿರುದ್ಧ ಹೋರಾಟಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ಸದಾ ಸಿದ್ಧವಿದೆ ಎಂದು ಕರವೇ ರಾಜ್ಯ ಉಪಾಧ್ಯಕ್ಷ ಶಿವರಾಜೇ ಗೌಡ ಹೇಳಿದರು.ಕರ್ನಾಟಕ ರಕ್ಷಣಾವೇದಿಕೆ(ಪ್ರವೀಣ್ ಶೆಟ್ಟಿ ಬಣ)ಕಳಸ ಮತ್ತು ಡಾ|ರಾಜ್ ಕನ್ನಡ ಸಂಘದ ವತಿಯಿಂದ ಪಟ್ಟಣದ ದುರ್ಗಾ ಮಂಟಪದಲ್ಲಿ ಶುಕ್ರವಾರ ರಾತ್ರಿ ನಡೆದ ರಾಜ್ಯೋತ್ಸವದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಇಲ್ಲಿಯ ಜನರ ಸ್ಥಿತಿ ಗತಿಗಳನ್ನು ಗಮನಿಸದೆ ವೈಮಾನಿಕ ಸಮೀಕ್ಷಿಗಳನ್ನು ನಡೆಸಿ ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡಲು ಹೊರಟಿರುವುದು ಖಂಡನೀಯವಾಗಿದೆ.ರೈತ ಕುಲಕ್ಕೆ ಅನ್ಯಾಯವಾಗಲು ನಾವು ಯಾವತ್ತೀಗೂ ಬಿಡುವುದಿಲ್ಲ.ರಾಜಕಾರಣಿಗಳಿಗೆ ಬುದ್ಧಿ ಕಲಿಸಲು ಹೋರಾಟವನ್ನು ಮಾಡಬೇಕಾಗಿದೆ.ಇವತ್ತು ಲಾಟಿ ಚಾರ್ಚ್,ಬೂಟಿನ ಹೊಡೆತಗಳಿಂದ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡಲಾಗುತ್ತಿದೆ.ಆದರೆ ಇದ್ಯಾವುದಕ್ಕೂ ನಾವು ಹೆದರುವುದಿಲ್ಲ.ಇವತ್ತು ಕೆಂಪು ಹಳದಿ ಮಿಶ್ರಿತ ಶಾಲುಗಳನ್ನು ಹಾಕಿ ರೋಲ್ ಕಾಲ್ ಮಾಡುವಂತಹ ನಕಲಿ ಕನ್ನಡ ಸಂಘಗಳು ಹುಟ್ಟಿಕೊಂಡಿದೆ.ಆದರೆ ಕರ್ನಾಟಕ ರಕ್ಷಣಾ ವೇದಿಕೆ ಇದು ಯಾರ ಆಸ್ತಿಯೂ ಅಲ್ಲ ಇದು ಕರ್ನಾಟಕದ ಆರುಕೋಟಿ ಜನರ ಆಸ್ತಿ ಎಂದು ಹೇಳಿದರು.

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಬೆಂಗಳೂರು ಇದರ ಕಾರ್ಯದರ್ಶಿ ರಾಘವೇಂದ್ರ ಕೆಸವಳಲು ಮಾತನಾಡಿ ನವಂಬರ್ ಒಂದು ದಿನದ ಮಟ್ಟಿಗೆ ಕನ್ನಡ ರಾಜ್ಯೋತ್ಸವ ಆಗಬಾರದು ಅದು ನಿತ್ಯೋತ್ಸವ ಆಗಬೇಕು.ಪ್ರತಿಯೊಬ್ಬ ಕನ್ನಡಿಗನೂ ಕೂಡ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ಪ್ರವೃತ್ತಿಯನ್ನು ಬೆಳೆಸಿಕೊಂಡಾಗ ಕನ್ನಡದ ಮೇಲಿನ ಅಭಿಮಾನ ಮತ್ತಷ್ಟು ಹೆಚ್ಚಾಗಲಿದೆ.ಕನ್ನಡಪರ ಸಂಘಟನೆಗಳು ಸ್ಥಳಿಯ ಮಟ್ಟದ ಸಮಸ್ಯೆಗಳಿಗೆ ಹೆಚ್ಚಿನ ಒತ್ತನ್ನು ನೀಡಿ ಹೋರಾಟಗಳ ಮುಖಾಂತರ ನ್ಯಾಯವನ್ನು ದೊರಕಿಸಿಕೊಡುವಂತ ಕೆಲಸ ಆಗಬೇಕು.ಕಳಸ ಹೋಬಳಿಯು ತಾಲ್ಲೂಕು ಕೇಂದ್ರದಿಂದ ನೂರು ಕಿ.ಮೀ ದೂರದಲ್ಲಿದೆ.ಇಲ್ಲಿ ಯಾರೇ ಒಬ್ಬ ಸರ್ಕಾರಿ ಕೆಲಸದ ಕಾರ್ಯಕ್ಕೆ ತಾಲ್ಲೂಕು ಕೇಂದ್ರಕ್ಕೆ ಹೋಗಬೇಕಾದರೆ ಒಂದು ದಿನ ಹಾಗೂ ನೂರಾರು ರೂಪೈ ವ್ಯಯಮಾಡಬೇಕಾಗಿದೆ.ಈ ಹೋಬಳಿಯು ತಾಲ್ಲೂಕು ಕೇಂದ್ರವಾಗುವ ಎಲ್ಲಾ ಅರ್ಹತೆಗಳನ್ನು ಪಡೆದಿದೆ.ಆದ್ದರಿಂದ ಕಳಸವನ್ನು ತಾಲ್ಲೂಕು ಕೇಂದ್ರವನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯ ಮಟ್ಟದಲ್ಲಿ ಪ್ರತಿಬಟನೆಗಳನ್ನು ಮಾಡಿ ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾದನೆ ಮಾಡಿದ ಸಾದಕರನ್ನು ಗೌರವಿಸಲಾಯಿತು.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕಳಸ ಕಲ್ಲುಬಾವಿ ಅಂಗನವಾಡಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಮತ್ತು ದ್ರುವತಾರೆ ಮ್ಯೂಸಿಕಲ್ ಇವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಡಾ|ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು,ಕಳಸ ಕರವೇ ಘಟಕದ ಅಧ್ಯಕ್ಷ ಸಂತೋಷ್,ಜಿಲ್ಲಾಧ್ಯಕ್ಷ ವಿಶ್ವನಾಥ,ರಂಗನಾಥ್ ಭಟ್,ಮಂಜೇಶ,ರತ್ನಮ್ಮ,ಸುಜಯ,ಜಾನಕಿ,ಜಗದೀಶ್ ಭಟ್,ಸುರೇಶ್ ಕುಮಾರ್, ವಿಜಯ್, ಭರತ್, ಆಸಿಪ್, ಸುರೇಂದ್ರ, ಅನಿಲ್ ಇತರರು ಇದ್ದರು.










