ನಿರಂತರ ಅಧ್ಯಯನ ಮತ್ತು ಹಿರಿಯ ವಕೀಲರ ಮಾರ್ಗದರ್ಶನದಿಂದ ಕಿರಿಯ ವಕೀಲರು ವೃತ್ತಿ ನೈಪುಣ್ಯ ಸಾಧಿಸಿ: ಎಂ.ಎಸ್.ಶಶಿಕಲಾ…

1042
firstsuddi

ಮೂಡಿಗೆರೆ : ದೇಶದ ಎಲ್ಲಾ ಕಾನೂನುಗಳಿಗೂ ಸಂವಿಧಾನ ತಳಹದಿಯಾಗಿದ್ದು, ಅದರಡಿ ರೂಪಿತವಾದ ಕಾನೂನುಗಳ ಅರಿವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಿಗುವಂತೆ ಜಾಗೃತಿ ಮೂಡಿಸಬೇಕು. ವಕೀಲರು ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಅರಿವು ಪಡೆದುಕೊಳ್ಳಬೇಕು. ಆರೋಗ್ಯ ಕಾಪಾಡಿಕೊಳ್ಳುವ ಜೊತೆಗೆ ಜ್ಞಾನ ಮತ್ತು ವೃತ್ತಿಯ ಅನುಭವ ಪಡೆದುಕೊಳ್ಳಬೇಕು ಯುವ ವಕೀಲರು ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧಿಶರಾದ ಎಂ.ಎಸ್. ಶಶಿಕಲಾ ತಿಳಿಸಿದರು.

  ಮೂಡಿಗೆರೆ ನ್ಯಾಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಕೀಲರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು ನ್ಯಾಯಾಧಿಶರನ್ನು ಕಂಡು ಯುವ ವಕೀಲರು ಭಯ ಪಡುವುದು ಬೇಡ ಅದರ ಬದಲಾಗಿ ಕಲಾಪಗಳಲ್ಲಿ ಭಾಗವಹಿಸಿ  ಬದಲಾಗುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ವಕೀಲರಿಗೆ ಪ್ರತಿಸ್ಪರ್ದಿಗಳೆಂದರೆ ವೈದ್ಯರು  ಈ ಎರಡೂ ವೃತ್ತಿಗಳು ಆರಂಭದಲ್ಲಿ ಕಷ್ಟವಾಗುತ್ತವೆ ಒಮ್ಮೆ ನಂಬಿಕೆ ಗಿಟ್ಟಿಸಿದರೆ ಕೊನೆವರೆಗೂ ಉಳಿಸಿಕೊಂಡು ಹೋಗಬೇಕು. ಆಗ ಮಾತ್ರ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯ  ಎಂದರು.

 ವೈದ್ಯರು ಜೀವ ಉಳಿಸುತ್ತಾರೆ,  ವಕೀಲರು ಜೀವನ ಕೊಡುತ್ತಾರೆ. ಅಪಾರ ಆಸ್ತಿ ಹೊಂದಿದ್ದರೆ ಅದನ್ನು ಅನುಭವಿಸಲು ಅವಕಾಶ ಮಾಡಿಕೊಡುವುದು ವಕೀಲರು. ಎಲ್‍ಎಲ್‍ಬಿ ಪದವಿ ಹಾಗೂ ಇನ್ನಿತರ ಕೋರ್ಸ್‍ಗಳನ್ನು ಮುಗಿಸಿ ನೇರವಾಗಿ ವೃತ್ತಿಗೆ ಬರುವಂತಹ ಅವಕಾಶ ಇರುವುದು ವಕೀಲ ವೃತ್ತಿಯಲ್ಲಿ ಮಾತ್ರ ಎಂದು ಹೇಳಿದರು. ಶೋಷಿತರಿಗೆ ನ್ಯಾಯ ಒದಗಿಸಿ ಕೊಡುವ ಮೂಲಕ ವೃತ್ತಿ ಧರ್ಮವನ್ನು ಎತ್ತಿಹಿಡಿಯುವ ಜೊತೆಗೆ ನ್ಯಾಯಾಲಯದ ಘನತೆ ಮತ್ತು ಸ್ವಾತಂತ್ರ್ಯ ಕಾಪಾಡುವಲ್ಲಿ ವಕೀಲರ ಪಾತ್ರ ಮಹತ್ವದಾಗಿದೆ ವಕೀಲ ವೃತ್ತಿಯಲ್ಲಿ ಅಧ್ಯಯನಶೀಲತೆ ಬಹಳ ಮುಖ್ಯ. ನಿರಂತರ ಅಧ್ಯಯನ ಮತ್ತು ಹಿರಿಯ ವಕೀಲರ ಮಾರ್ಗದರ್ಶನದಿಂದ ಕಿರಿಯ ವಕೀಲರು ವೃತ್ತಿ ನೈಪುಣ್ಯ ಸಾಧಿಸಿ, ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಹಕರಿಸಬೇಕು’ ಎಂದು ಸಲಹೆ ನೀಡಿದರು.

   ವಕೀಲರಾದ ಎಂ.ವಿ.ಜಯರಾಜ್ ಪ್ರಸ್ತಾವಿಕವಾಗಿ ಮಾತನಾಡುತ್ತಾ,  ಹೆಚ್ಚಿನ ರಾಜಕಾರಣಿಗಳು ವಕೀಲ ವೃತ್ತಿಯಿಂದಲೇ ಬಂದವರು. ಹೀಗಾಗಿ, ರಾಜಕಾರಣಿಗೂ ವಕೀಲ ವೃತ್ತಿಗೂ ಹತ್ತಿರದ ನಂಟಿದೆ. ಸ್ವಾತಂತ್ರ್ಯ ನಂತರದ ಮೊದಲ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರ ಜನ್ಮದಿನವನ್ನು ವಕೀಲರ ದಿನವಾಗಿ ಆಚರಣೆ ಮಾಡಲಾಗುತ್ತಿದೆ. ಇವರೂ ವಕೀಲರು ಎಂದು ಹೇಳಿದರು. ವಕೀಲರು ಮತ್ತು ನ್ಯಾಯಾಧಿಶರು ಒಂದೇ ಬಂಡಿಯ ಎರಡು ಚಕ್ರಗಳಿದ್ದಂತೆ.  ದಿನದ 24 ಗಂಟೆಗಳ ಕಾಲವು ಕೆಲಸ ಮಾಡುವುದು ಅನಿವಾರ್ಯವಾಗಿರುತ್ತದೆ, ಎಷ್ಟೇ ಒತ್ತಡಗಳಿದ್ದರು ಅವುಗಳನ್ನು ಬದಿಗೊತ್ತಿ (ಆನೆ) ಆರೋಗ್ಯ ಮತ್ತು ನೆಮ್ಮದಿಯನ್ನು ನಾವೇ ತೆಗೆದುಕೊಳ್ಳಬೇಕು. ಒಂಬತ್ತು ಸಾವಿರಕ್ಕೂ ಅಧಿಕ ಕಾನೂನುಗಳಿದ್ದು ಅವುಗಳ ಬಗ್ಗೆ ಪ್ರತಿಯೊಬ್ಬ ವಕೀಲರು ಅರಿತುಕೊಳ್ಳುವುದು ಬಹಳ ಮುಖ್ಯ  ಎಂದರು.

  ಹಿರಿಯ ವಕೀಲರುಗಳಾದ ಕೆ.ಎನ್.ಪ್ರಶಾಂತ್, ಎಂ.ಎಸ್.ಗೋಪಾಲಗೌಡ, ಡಿ.ಎಸ್.ಸುರೇಂದ್ರ, ಬಿ.ಟಿ.ನಟರಾಜ್ ಮಾತನಾಡಿದರು. ಇದೇ ಸಂಧರ್ಭದಲ್ಲಿ ಹಿರಿಯ ವಕೀಲರಾದ ಎಂ.ಎಸ್.ಗೋಪಾಲಗೌಡ ಮತ್ತು ನಿವೃತ್ತ ಯೋಧ ಎಂ.ಎಂ.ರವೀಂದ್ರ ಅವರ ಸೇವೆಯನ್ನು ಗುರುತಿಸಿ ಗೌರವಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.

  ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಎಂ.ಎಲ್.ಅಶೋಕ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರಕೃತಿಕಲ್ಯಾಣಪುರ್, ಸರ್ಕಾರಿ ಸಹಾಯಕ ಅಭಿಯೋಜಕ ಸುನೀಲ್ ಪಾಟೇಲ್, ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್.ಮಹೇಶ್, ಕಾರ್ಯದರ್ಶಿ ಬಿ.ಎ.ಸುರೇಶ್, ಸಹಕಾರ್ಯದರ್ಶಿ ಹೆಚ್.ಎಸ್.ಪೂರ್ಣೆಶ್, ಖಜಾಂಚಿ ಎಂ.ಎಂ.ರಾಘವೇಂದ್ರ ಉಪಸ್ಥಿತರಿದ್ದರು, ಇದೇ ಸಂಧರ್ಭದಲ್ಲಿ ವಕೀಲರುಗಳು ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಆಟೋಟ ಸ್ಪರ್ದೆಗಳನ್ನು ಏರ್ಪಡಿಸಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.