ಚಿಕ್ಕಮಗಳೂರು: ಸದಾ ಕಲಹಗಳನ್ನು ಸೃಷ್ಟಿಸುತ್ತಾ ತನ್ನ ದುರ್ವರ್ತನೆಯಿಂದ ಊರಿನ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತಿರುವ ವ್ಯಕ್ತಿಯನ್ನು ತರೀಕೆರೆಯಿಂದ ಗಡಿಪಾರು ಮಾಡುವಂತೆ ತರೀಕೆರೆ ಬಾಪೂಜಿ ಕಾಲೋನಿಯ ನಿವಾಸಿಗಳು ಜಿಲ್ಲಾ ಪೋಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರ ನೇತೃತ್ವದಲ್ಲಿ ಜಿಲ್ಲಾ ಪೋಲೀಸ್ ಮುಖ್ಯಾಧಿಕಾರಿ ಹರೀಶ್ ಪಾಂಡೆ ಅವರನ್ನು ಬುಧವಾರ ಭೇಟಿ ಮಾಡಿದ ಕಾಲೋನಿಯ ನಿವಾಸಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ತಮ್ಮ ಕಾಲೋನಿಯಲ್ಲಿ ತಿಪ್ಪೇಶ ಆಲಿಯಾಸ್ ಅರುಂಧತಿ ಎಂಬ ಮಂಗಳಮುಖಿಯೋರ್ವರು ಕಳೆದ 2 ವರ್ಷಗಳಿಂದ ಸದಾ ಒಂದಿಲ್ಲೊಂದು ಕಲಹಗಳನ್ನು ಸೃಷ್ಠಿಸುತ್ತಾ ಗ್ರಾಮದ ಶಾಂತಿ ಮತ್ತು ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ, ಜನಪ್ರತಿನಿಧಿಗಳು ಮತ್ತು ಸಮಾಜದ ಮುಖಂಡರ ಮೇಲೆ ಇಲ್ಲಸಲ್ಲದ ಮೊಕದ್ದಮೆಗಳನ್ನು ದಾಖಲಿಸುತ್ತಿದ್ದಾರೆ ಎಂದು ದೂರಿದರು.
ನಾನು ಮಂಗಳಮುಖಿಯಾಗಿರುವುದರಿಂದ ನಾನು ಏನು ಮಾಡಿದರೂ ಯಾರೂ ನನ್ನನ್ನು ಕೇಳುವುದಿಲ್ಲ, ಕಾನೂನು ನನ್ನ ಪರವಾಗಿದೆ, ನಿಮ್ಮನ್ನು ಸುಟ್ಟುಬಿಡುತ್ತೇನೆ ಎಂದು ಹೆದರಿಸುವ ಆತ ರಾತ್ರಿ ವೇಳೆ ಚೌಡಿ, ದುರ್ಗಿ ಮತ್ತು ಮೋಹಿನಿ ವೇಷಗಳನ್ನು ಧರಿಸಿಕೊಂಡು ಕೇರಿ ಕೇರಿಗಳಲ್ಲಿ ಸುತ್ತುತ್ತಾ ಮನೆಗಳ ಮೇಲೆ ವಿಭೂತಿ ಎಸೆಯುತ್ತಿದ್ದಾನೆ, ತ್ರಿಶೂಲ ಹಿಡಿದು ಪ್ರಾಣಭಯ ಮೂಡಿಸುತ್ತಿದ್ದಾನೆ ಎಂದು ಆರೋಪಿಸಿದರು.
ರಾತ್ರಿ ವೇಳೆ ಅಮಾಯಕರನ್ನು ಕರೆದು ಕಾಲಿಗೆ ಬೀಳಿಸಿಕೊಳ್ಳುವುದು, ಅವರ ಮೇಲೆ ದೌರ್ಜನ್ಯವೆಸಗುವುದು ಮಾಡುತ್ತಿರುವ ಆತ ಗ್ರಾಮ ದೇವತೆ ಶ್ರೀ ಅಂತರ ಘಟ್ಟಮ್ಮನವರ ದೇವಸ್ಥಾನಕ್ಕೆ ಬೀಗಹಾಕಿ ಕೀಯನ್ನು ಇಟ್ಟುಕೊಂಡಿರುವುದರಿಂದ ದೇವಾಲಯದಲ್ಲಿ ಕಳೆದ 5 ದಿನಗಳಿಂದ ದಿನನಿತ್ಯದ ಪೂಜೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡರು.
ಮೊಬೈಲ್‍ನಲ್ಲಿ ದಾಖಲಿಸಿದ್ದ ಆತನ ನಡವಳಿಕೆಗಳನ್ನು ಪೋಲೀಸ್ ಮುಖ್ಯಾಧಿಕಾರಿ ಎದುರು ಪ್ರದರ್ಶಿಸಿದ ನಿವಾಸಿಗಳು ತಕ್ಷಣ ಆತನನ್ನು ತರೀಕೆರೆಯಿಂದ ಗಡಿಪಾರು ಮಾಡುವ ಮೂಲಕ ನಾವುಗಳು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಮನವಿಗೆ ಪ್ರತಿಕ್ರಿಯಿಸಿದ ಎಸ್.ಪಿ ಹರೀಶ್ ಪಾಂಡೆ ಈಗಾಗಲೇ ಅತನ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದ್ದು, ಆತನ ಗಡಿಪಾರಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ, ಸಂಘಟನಾ ಸಂಚಾಲಕರಾದ ಮಹೇಂದ್ರ ಸ್ವಾಮಿ, ಖಂಡಪ್ಪ, ಖಜಾಂಚಿ ಅರ್.ಶೇಖರ್, ತರೀಕೆರೆ ತಾಲ್ಲೂಕು ಸಂಚಾಲಕ ಅಣ್ಣಪ್ಪ, ಕಡೂರು ಸಂಚಾಲಕ ಲಕ್ಷ್ಮಣ್, ನಿವಾಸಿಗಳಾದ ಟಿ.ಹೆಚ್.ಶ್ರೀನಿವಾಸ್, ವೇಣು, ಸಚಿನ್, ಗೌರಮ್ಮ, ಕುಮಾರ್, ಟಿ.ಲೋಕೇಶ್, ಶೋಭಾ, ಪದ್ಮ, ರತ್ನಮ್ಮ ಹಾಜರಿದ್ದರು.












