ನಾವು ಮಾಡಿದ ಪಾಪಪುಣ್ಯಗಳ ಫಲ ಮಾತ್ರ ನಮ್ಮೊಂದಿಗೆ ಬರುತ್ತದೆ : ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ…

308
firstsuddi

ಚಿಕ್ಕಮಗಳೂರು: ಮನುಷ್ಯರು ಆಧ್ಯಾತ್ಮ ಜೀವಿಗಳು ಮತ್ತು ಪರೋಪಕಾರಿಗಳಾಗಿ ತಮ್ಮ ಜನ್ಮವನ್ನು ಸಾರ್ಥಕಪಡಿಸಿಕೊಳ್ಳಬೇಕು ಎಂದು ಹರಿಹರಪುರ ಶ್ರೀಮಠದ ಶ್ರೀ ಸ್ವಯಂ ಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಸಲಹೆ ಮಾಡಿದರು.
ನಗರದ ತಮಿಳು ಕಾಲೋನಿಯ ಶ್ರೀ ಕರುಮಾರಿಯಮ್ಮನವರ ದೇವಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಗೋಪುರವನ್ನು ಶುಕ್ರವಾರ ಉದ್ಘಾಟಿಸಿ ಕುಂಭಾಬಿಷೇಕ ನೆರವೇರಿಸಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮನುಷ್ಯನಿಗೆ ಹಣಬಲ, ಜನಬಲ, ಅಧಿಕಾರ, ಅಂತಸ್ತು ಯಾವುದರಿಂಲೂ ಉಪಯೋಗವಿಲ್ಲ, ನಮ್ಮ ಅಂತ್ಯ ಕಾಲದಲ್ಲಿ ನಾವು ಗಳಿಸಿದ ಹಣ, ಅಸ್ತಿ, ಅಂತಸ್ತು, ಹೆಂಡತಿ, ಮಕ್ಕಳು, ಬಂಧುಬಳಗ ಯಾವುದೂ ಹಿಂದೆ ಬರುವುದಿಲ್ಲ ಆಗ ನಾವು ಮಾಡಿದ ಪಾಪಪುಣ್ಯಗಳ ಫಲ ಮಾತ್ರ ನಮ್ಮೊಂದಿಗೆ ಬರುತ್ತದೆ ಎಂದರು.
ಹಾಗಾಗಿ ಮನುಷ್ಯರು ಸದಾಕಾಲ ಸತ್ ಚಿಂತನೆ, ಸತ್ಕಾರ್ಯ ಮತ್ತು ಧರ್ಮಾಚರಣೆಯನ್ನು ಮಾಡಬೇಕು, ಪರೋಪಕಾರಿಗಳಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು.

firstsuddi

ದೈವೀಶಕ್ತಿ ಎಲ್ಲಾ ಶಕ್ತಿಗಳಿಗಿಂತ ಮಿಗಿಲಾದದ್ದು ಜಗತ್ತಿನಲ್ಲಿ ಎಲ್ಲವೂ ಸುಗಮವಾಗಿ ನಡೆಯಬೇಕಾದರೆ ಆ ಶಕ್ತಿಯ ಅನುಗ್ರಹ ಬೇಕು. ಸೂರ್ಯನಿಗೆ ಪ್ರಕಾಶಿಸುವ ಗುಣ, ನೀರಿಗೆ ಹರಿಯುವ ಗುಣ, ಬೆಂಕಿಗೆ ಪ್ರಜ್ವಲಿಸುವ ಗುಣ, ವಾಯುವಿಗೆ ಚಲಿಸುವ ಶಕ್ತಿಯನ್ನು ನೀಡಿರುವ ಆದಿಪರಾಶಕ್ತಿ ನಮ್ಮೆಲ್ಲರಿಗೂ ಆತ್ಮಸ್ವರೂಪಿಯಾಗಿದ್ದಾಳೆ ಎಂದು ತಿಳಿಸಿದರು.
ಆದಿಪರಾಶಕ್ತಿಯನ್ನು ನಿಜವಾದ ಭಕ್ತಿಯಿಂದ ಯಾರು ಪ್ರಾರ್ಥಿಸಿ, ಪೂಜಿಸಿ ಆರಾಧಿಸುತ್ತಾರೋ ಅವರಿಗೆ ಆಕೆ ಪರಿಪೂರ್ಣವಾಗಿ ಅನುಗ್ರಹಿಸುತ್ತಾಳೆ ಎಂದು ಕಿವಿಮಾತು ಹೇಳಿದರು.
ಕುಂಭಾಬಿಷೇಕದ ಪ್ರಯುಕ್ತ ಬೆಳಿಗ್ಗೆ ಶಂಕರಮಠದ ಮುಂಭಾಗದಿಂದ ಗಂಗಾ ಕಲಶಗಳನ್ನು ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು, ಕಲಾಸಾನ್ನಿಧ್ಯ ಹೋಮ ಜರುಗಿತು, ಶ್ರೀಗಳು ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ಶ್ರೀ ಕರುಮಾರಿಯಮ್ಮನವರಿಗೆ ಅಭಿಷೇಕ, ವಿಶೇಷ ಪೂಜೆ, ಗೋಪುರಕ್ಕೆ ಕುಂಭಾಬಿಷೇಕ ನೆರವೇರಿಸಿದರು.
ದೇವಾಲಯ ಸಮಿತಿ ವತಿಯಿಂದ ಶ್ರೀಗಳಿಗೆ ಪಾದಪೂಜೆ ಮಾಡಲಾಯಿತು, ಗೋಪುರ ನಿರ್ಮಾಣಕ್ಕೆ ಸಹಕರಿಸಿದವರು, ದಾನಿಗಳು ಮತ್ತು ಗೋಪುರ ಶಿಲ್ಪಿಯನ್ನು ಸನ್ಮಾನಿಸಲಾಯಿತು, ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ದೇವಾಲಯ ಸಮಿತಿಯ ಗೌರವಾಧ್ಯಕ್ಷರಾದ ಪಿ.ಮಾಧು, ಎ.ಪಿ.ಬಲರಾಮ್, ರಾಮಲಿಂಗಂ, ಅಧ್ಯಕ್ಷ ಜಿ.ರಘು, ಉಪಾಧ್ಯಕ್ಷ ಎಸ್.ಎನ್.ಮಂಜು, ಪ್ರಧಾನ ಕಾರ್ಯದರ್ಶಿ ಆರ್.ಮಂಜು, ಖಜಾಂಚಿ ಎಂ.ರಮೇಶ್, ಕೆ.ರವಿ, ಕೆ.ಮಂಜು, ಕೆ.ಕುಮಾರ್, ಎಂ.ಶರವಣ ಹಾಜರಿದ್ದರು.