ಕಳಸ: ಎರಡು ಮಂಗಗಳ ಸಾವು, ಗ್ರಾಮಸ್ಥರಲ್ಲಿ ಮೂಡಿದ ಆತಂಕ …

1166
firstsuddi

ಕಳಸ: ಪಟ್ಟಣದ ಹೃದಯಭಾಗದಲ್ಲಿರುವ ಧನಲಕ್ಷ್ಮೀ ನಿಲಯದ ಹಿಂಭಾಗ ಅನಂತ ಕಾಮತ್ ಎಂಬುವರ ತೋಟದಲ್ಲಿ ಎರಡು ಮಂಗಗಳು ಸತ್ತಿದ್ದು, ಇಂದು ಕಳಸ ದೇವಸ್ಥಾನದ ಸಮೀಪ ಒಂದು ಮಂಗ ಸತ್ತಿರುವ ಬಗ್ಗೆ ವರದಿಯಾಗಿದೆ. ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ,ಆರೋಗ್ಯ ಇಲಾಖೆ ಮತ್ತು ಪಶು ಆಸ್ಪತ್ರೆಯ ವೈದ್ಯರುಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಸ್ಥಳಕ್ಕೆ ಮೂರು ಇಲಾಖೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದರು. ವೈದ್ಯರು ಮಂಗಗಳ ಕಳೆಬರಹದ ಮರಣೋತ್ತರ ಪರೀಕ್ಷೆ ನಡೆಸಿ,ರಕ್ತದ ಮಾದರಿಯನ್ನು ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಬಳಿಕ ಆ ಪ್ರದೇಶಕ್ಕೆ ಔಷದಿಯನ್ನು ಸಿಂಪಡಿಸಿ, ಮಂಗಗಳನ್ನು ಸುಟ್ಟು ಹಾಕಲಾಯಿತು.ಮಂಗ ಯಾವ ಕಾರಣದಿಂದ ಸತ್ತು ಹೋಗಿದೆ ಎನ್ನುವ ವಿವರ ಪ್ರಯೋಗಾಲಯದಿಂದ ವರದಿ ಬಂದ ನಂತರವೇ ತಿಳಿಯಬೇಕಾಗಿದೆ.
ಗ್ರಾಮಸ್ಥರಲ್ಲಿ ಮೂಡಿದ ಆತಂಕ.
ಮಂಗನ ಕಾಯಿಲೆಯ ಸೋಂಕು ತಗುಲಿ ಈಗಾಗಲೇ ಮಲೆನಾಡಿನಲ್ಲಿ ಹಲವರ ಜೀವ ತೆಗೆದ ಬೆನ್ನಲ್ಲೇ ಪಟ್ಟಣದಲ್ಲಿಯೇ ಮಂಗಗಳು ಸತ್ತು ಹೋಗಿರುವುದರಿಂದ ಹೋಬಳಿಗೂ ಮಂಗನ ಕಾಯಿಲೆ ಕಾಲಿಟ್ಟಿದ್ಯಾ ಎನ್ನುವ ಆತಂಕ ಗ್ರಾಮಸ್ಥರಲ್ಲಿ ಶುರುವಾಗಿದೆ.
ಶಿವಮೊಗ್ಗದಲ್ಲಿ ತನ್ನ ಅಟ್ಟಹಾಸ ತೋರಿದ್ದ ಈ ಕಾಯಿಲೆ ಇದೀಗ ಹೊಬಳಿಗೂ ಕಾಲಿಟ್ಟಿದೆಯಾ ಎನ್ನುವ ಆತಂಕ ಎದುರಾಗಿದೆ.
ಈ ಭಾಗದಲ್ಲಿ ಹಿಂಡುಗಟ್ಟಲೇ ಮಂಗಗಳು ಇದ್ದು, ಪ್ರತಿ ನಿತ್ಯ ಪಟ್ಟಣ,ಹಳ್ಳಿಗಳಿಗೆ ಲಗ್ಗೆ ಇಡುತ್ತಿವೆ.ಮೂರು ವರ್ಷಗಳ ಹಿಂದೊಮ್ಮೆ ಪಟ್ಟಣದಲ್ಲಿ ಮಂಗಗಳು ಬಾರಿ ತೊಂದರೆ ನೀಡುತ್ತಿದ್ದ ಹಿನ್ನಲೆಯಲ್ಲಿ ಮಂಗಗಳನ್ನು ಹಿಡಿದು ಕುದುರೆಮುಖ ಅಭಯಾರಣ್ಯಕ್ಕೆ ಬಿಡಲಾಗಿತ್ತು.
ಈಗ ಮತ್ತೆ ಮಂಗಗಳ ಉಟಪಳ ಪಟ್ಟಣ ಹಾಗೂ ಹಳ್ಳಿಗಳಲ್ಲಿ ಮುಂದುವರೆದಿದೆ. ಆದರೆ ಈಗ ಮಂಗಗಳ ಸರಣಿ ಸಾವಿನಿಂದ ಮಂಗಗಳು ವೈರಾಣುವಿನಿಂದ ಸಾವಿಗೀಡಾಗಿವೆಯೇ ಅಥವಾ ಮಂಗಗಳ ಉಪಟಲಕ್ಕೆ ಯಾರಾದರೂ ವಿಷವಿಕ್ಕಿದ್ದಾರೆಯೇ ಎನ್ನುವ ಅನುಮಾನವು ಇದೆ.
ಆದರೆ ಈಗಾಗಲೇ ಮಂಗನ ಕಾಯಿಲೆಯು ಮಲೆನಾಡಿಗೆ ಕಾಲಿಟ್ಟ ಹಿನ್ನಲೆಯಲ್ಲಿ ಗ್ರಾಮಸ್ಥರು ಅತಂಕ ಗೊಂಡಿದ್ದಾರೆ. ಕೂಡಲೇ ರಕ್ತದ ಪರೀಕ್ಷೆಯ ವರದಿಯನ್ನು ತರಿಸಿ ಮಂಗಗಳ ಸಾವಿಗೆ ನಿಖರ ಕಾರಣವನ್ನು ತಿಳಿಸಬೇಕು. ಅಲ್ಲದೆ ಗ್ರಾಮದಲ್ಲಿ ಔಷದಿಗಳನ್ನು ಸಿಂಪಡಿಸಬೇಕು. ಆಸ್ಪತ್ರೆಯಲ್ಲಿ ಬೇಕಾಗುವ ಚುಚ್ಚು ಮದ್ದನ್ನು ಶೇಖರಣೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.