ಮಳಲೂರಿನಲ್ಲಿ ನಡೆಯಲಿರುವ ಪ್ರಥಮ ಜಿಲ್ಲಾ ಜಾನಪದ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊರುಚ ಅವಿರೋಧವಾಗಿ ಆಯ್ಕೆ…

252
firstsuddi

ಚಿಕ್ಕಮಗಳೂರು: ತಾಲ್ಲೂಕಿನ ಮಳಲೂರಿನಲ್ಲಿ ಫೆ.24 ರಂದು ನಡೆಯಲಿರುವ ಪ್ರಥಮ ಜಿಲ್ಲಾ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಸಾಹಿತಿ ಗೊರುಚ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮಳಲೂರಿನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಈ ಸಂಬಂಧ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಗುರುವಾರ ಸಾಹಿತಿ ಗೊರುಚ ಅವರಿಗೆ ಅಧಿಕೃತವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೊರುಚ ತಮ್ಮ ತವರು ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರಥಮ ಜಾನಪದ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿ ಕಾರ್ಯನಿರ್ವಹಿಸಲು ತಮಗೆ ಸಂತಸ ಮತ್ತು ಹೆಮ್ಮೆಯಾಗುತ್ತಿದೆ ಎಂದರು.
ಆಧುನಿಕತೆಯ ನಾಗಾಲೋಟದಲ್ಲಿ ಮರೆಯಾಗುತ್ತಿರುವ ಜಾನಪದವನ್ನು ಮುಂದಿನ ತಲೆಮಾರಿಗೆ ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಪರಿಷತ್ ಜಾನಪದದ ಮೂಲ ಕಲೆಗಳನ್ನು ಮತ್ತು ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್, ಖಜಾಂಚಿ ವಾಜುವಳ್ಳಿ ರಮೇಶ್, ಹೋಬಳಿ ಅಧ್ಯಕ್ಷ ಎಂ.ಎಲ್.ಚಂದ್ರೇಗೌಡ, ರೈತ ಸಂಘದ ಮುಖಂಡ ಕೆ.ಕೆ.ಕೃಷ್ಣೇಗೌಡ, ಜಾವಣಿಗೆ ನಾಡಿನ ಮುಖಂಡ ತಿಮ್ಮೇಗೌಡ, ಮಳಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣ, ಸದಸ್ಯ ಹೆಚ್.ಇ.ಪಸನ್ನ ಕುಮಾರ್, ಎಂ.ಡಿ.ಪರಮೇಶ್, ಪುಟ್ಟಣ್ಣ, ಶರವಣಗೌಡ ಹಾಜರಿದ್ದರು.