ಆರ್ಥಿಕ ಮೀಸಲಾತಿ; ಸಂವಿಧಾನಕ್ಕೆ ಸವಾಲೆಸೆದ ವಿಕೃತಿ…

574
firstsuddi

ಡಾ.ಎಂ.ಎಸ್.ಮಣಿ
ಭಾಗ – 2 
ಇರಲಿ, ಹಿಂದುಳಿದ ವರ್ಗಗಳ ಮೀಸಲಾತಿ ಫಲ ಪಡೆಯಲು ವರ್ಗೀಕರಣಗೊಳಿಸಲು ನ್ಯಾಯಮೂರ್ತಿ ರೋಹಿಣಿ ನೇತೃತ್ವದ ಆಯೋಗವನ್ನು ಅಸ್ತಿತ್ವಕ್ಕೆ ತರಲಾಯಿತು. ಆಯೋಗವನ್ನು ನಾಲ್ಕನೇ ಅವಧಿಗೆ ಮುಂದುವರೆಸಿದ್ದರೂ ವರ್ಗೀಕರಣದ ಕೆಲಸ ಮಾಡಿರಲಿಲ್ಲ. ಇದನ್ನರಿತ ಕೇಂದ್ರ ಮಂತ್ರಿ ಉಪೇಂದ್ರ ಕುಶ್ವಾ ಅವರು ಹಿಂದುಳಿದ ವರ್ಗಗಳಲ್ಲಿ ವರ್ಗೀಕರಣ ಮಾಡಲು ಭಯ ಮತ್ತು ಗೊಂದಲ ವನ್ನು ಸರ್ಕಾರ ಹೊಂದಿದೆ ಎಂದು ಆರೋಪಿಸಿದ್ದರು. ಅಲ್ಲದೆ, ವಿಶ್ವವಿದ್ಯಾಲಯಗಳ ಶಿಕ್ಷಕರ ನೇಮಕಾತಿಯಲ್ಲಿ ಅಳವಡಿಸಿರುವ ರೋಸ್ಟರ್ ವ್ಯವಸ್ಥೆಯಲ್ಲೂ ಸಂದೇಹವಿದೆ. ವರ್ಗೀಕರಣಗೊಳ್ಳದೆ ಹೊಸ ನೇಮಕಾತಿಗಳು ನಿಂತುಹೋಗಿವೆ ಎಂದು ಆರೋಪಿಸಿ ಉಪೇಂದ್ರ ಕುಶ್ವಾ ಎನ್ಡಿಎ ಮೈತ್ರಿಕೂಟ ತೊರೆದು ಹೊರಬಂದಿದ್ದಾರೆ.
ಸಂವಿಧಾನದ 340ನೇ ವಿಧಿಯ ಪ್ರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರ ಮೀಸಲಾತಿ ನೀಡಬಹುದು. ಅಂದರೆ ಮೀಸಲಾತಿಯನ್ನು ಒಂದು ವರ್ಗದ ಜನರಿಗೆ ನೀಡಬಹುದು. ಒಂದು ವರ್ಗದೊಳಗಿನ ಸಮೂಹಕ್ಕಲ್ಲ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕಾಂತರಾಜು ಹೇಳಿದ್ದಾರೆ. ಇದಕ್ಕೆ ಪೂರಕವಾಗಿ 1992 ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲು ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.50 ನ್ನು ಮೀರಬಾರದು ಎಂದಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. ಹಾಗೆಯೇ ಕೇಂದ್ರ ಸರ್ಕಾರ ಮೇಲ್ವರ್ಗದ ಬಡವರಿಗೆ ಮೀಸಲು ನೀಡಬೇಕೆಂದರೆ, ಅನುಚ್ಛೇದ 15 ಮತ್ತು 16 ಹಾಗೂ 340 ಕ್ಕೆ ತಿದ್ದುಪಡಿ ತರಬೇಕು. ಇಲ್ಲಿ ಅನುಚ್ಛೇದ 15ಕ್ಕಿರುವ ಉಪಭಂದಗಳಿಗೆ 6ನೇ ಉಪಭಂದ ಸೇರಿಸಿ ಆರ್ಥಿಕ ದುರ್ಬಲ ವರ್ಗಗಳು ಸಹ ವಿಶೇಷ ಕ್ರಮದಲ್ಲಿ ಒಳಗೊಳ್ಳುವಂತೆ ಮಾಡಲಾಗಿದೆ. ಅನುಚ್ಛೇದ 15 (4)ದೃಢವಾದ ಕ್ರಮ ಕುರಿತು ವಿವೇಚಿಸುವುದರೊಂದಿಗೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಮತ್ತು ಎಸ್.ಸಿ/ಎಸ್.ಟಿ ವರ್ಗಗಳನ್ನು ಒಳಗೊಂಡಿದೆ. ಹಾಗೆಯೇ ಅನುಚ್ಛೇದ 16 (4) ರನ್ವಯ ದೇಶದ ಹಿಂದುಳಿದ ನಾಗರೀಕನಿಗೆ ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಪ್ರಾತಿನಿಧ್ಯ ಹೊಂದಿಲ್ಲವಾದರೆ ಸೌಲಭ್ಯಗಳನ್ನು ಒದಗಿಸಿಕೊಡಬಹುದಾಗಿದೆ.
ಇದೇನೇ ಸೂಕ್ಷ್ಮ ಅಂಶಗಳಿದ್ದರೂ, ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಇದು ನ್ಯಾಯಾಂಗದ ವಿಮರ್ಶೆಯಿಂದ ಪಾರಾಗಲು ಸಾಧ್ಯವಿಲ್ಲ ಎಂದು ಕಾಂತರಾಜು ಅವರು ಎಚ್ಚರಿಸಿದ್ದಾರೆ. ಮೇಲ್ವರ್ಗದ ಬಡವರಿಗೆ ಶೇ.10 ಮೀಸಲು ಕಲ್ಪಿಸಿರುವುದು ಭಾಜಪ ಪಾಲಿಗೆ ಮತದ ಗಣಿಯಂತಾಗಿದೆ. ರಾಜಕೀಯ ವಲಯದಲ್ಲಂತೂ ಕಂಪನ ಸೃಷ್ಟಿಸಿದೆ. ಇಂತದ್ದೊಂದು ಸಾಂವಿಧಾನಿಕ ತಿದ್ದುಪಡಿಯಿಂದ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುತ್ತದೆಯೇ ಎಂದು ನ್ಯಾಯಾಲಯ ಶೋಧಿಸುತ್ತದೆ. ಆದರೆ, ಜನಹಿತ್ ಅಭಿಯಾನ್ ಮತ್ತು ಯೂತ್ ಫಾರ್ ಇಕ್ವಾಲಿಟಿ ಎಂಬ ಸರ್ಕಾರೇತರ ಸಂಸ್ಥೆ ತೆಹಸೀನ್ ಪೂನಾವಾಲಾ ಅವರು ತಡೆಯಾಜ್ಞೆ ಕೋರಿ ಸುಪ್ರಿಂ ಕೊರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಮೇಲ್ಜಾತಿ ಮೀಸಲಾತಿಗೆ ತಡೆ ಅಸಾಧ್ಯ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೂಯ್ ನೇತೃತ್ವದ ಪೀಠ ಸ್ಪಷ್ಟಪಡಿಸಿದೆ.
೧೯೭೩ ರ ಕೇಶವಾನಂದ ಭಾರತಿ ಗಿ/s ಸ್ಟೇಟ್ ಆಫ್ ಕೇರಳ ಪ್ರಕರಣದಲ್ಲಿ ಸಂಸತ್ತು ಸಂವಿಧಾನದ ಯಾವುದೇ ಅನುಚ್ಛೇದಗಳನ್ನು ತಿದ್ದುಪಡಿ ಮಾಡಲು ಸಾರ್ವಭೌಮತ್ವ ಹೊಂದಿದೆ. ಆದರೆ ತಿದ್ದುಪಡಿಯಿಂದ ಸಂವಿಧಾನದ ಮೂಲ ಸ್ವರೂಪ ಬದಲಾಯಿಸಲು ಅಥವಾ ಕುಂಠಿತಗೊಳಿಸಲು ಸಾಧ್ಯವಿಲ್ಲ ಎಂದು ವಿಚಾರ ಸಂಕಿರಣದಲ್ಲಿ ಸಂವಿಧಾನ ತಜ್ಞ ಕಾಂತರಾಜು ಅವರು ಹೇಳಿದರು.ಸಂವಿಧಾನ ರಚನಾ ಸಭೆಯ ಚರ್ಚೆಯನ್ನು ಉಲ್ಲೇಖಿಸುವ ಮೂಲಕ ನ್ಯಾಯಾಲಯ ಪ್ರಕರಣವನ್ನು ಕಂಡಿದೆ ಎಂದೂ ಹೇಳಿದರು. ಮೀಸಲಾತಿಗೆ ಮಾನದಂಡ ಸಾಮಾಜಿಕ ಹಾಗೂ ಶೈಕ್ಷಣಿಕ ಹಿನ್ನೆಲೆಯೇ ಹೊರತು ಆರ್ಥಿಕತೆಯಲ್ಲ. ಇದು ಸಂವಿಧಾನ ರಚನಾ ಸಭೆಯ ಚರ್ಚೆಯಿಂದ ಸ್ಪಷ್ಟವಾಗಿದೆ ಎಂದೂ ಹೇಳಿದರು. ಮಂಡಲ್ ಆಯೋಗ ಒಂದು ಸಮೂಹದ ಆರ್ಥಿಕ ನೆಲೆಯನ್ನು ಗಮನದಲ್ಲಿರಿಸಿಕೊಂಡಿದೆ. ಆದರೆ, ಇದೇ ಅಂತಿಮವಲ್ಲ. ಬದಲಾಗಿ ಹಲವು ಮಾನದಂಡಗಳಲ್ಲಿ ಬಂದಾಗಿದೆ ಎನ್ನುತ್ತಾರೆ ವಕೀಲ ಚಂದ್ರಮೋಹನ್.
ತಮಿಳುನಾಡು ಸಂವಿಧಾನದ 9ನೇ ಅನುಚ್ಛೇದದ ರಕ್ಷಣೆಯೊಂದಿಗೆ ಶೇ.69ರಷ್ಟು ಮೀಸಲಾತಿಯನ್ನು ಹೊಂದಿದೆ. ಇಂತದ್ದೊಂದು ಕ್ರಾಂತಿಕಾರಕ ತೀರ್ಮಾನದ ಬಗ್ಗೆ ನ್ಯಾಯಾಲಯ ಅಂತಿಮ ತೀರ್ಪು ನೀಡಿರುವುದಿಲ್ಲ. ಕಾನೂನಾತ್ಮಕ ಸಿಂಧುತ್ವ ಕೂಡ ಸಾಬೀತಾಗಿಲ್ಲ. ತೆಲಂಗಾಣ ತನ್ನ ಮೀಸಲು ಕೋಟಾವನ್ನು ಶೇ.62 ಕ್ಕೆ ಏರಿಸಿಕೊಳ್ಳಲು ಪ್ರಯತ್ನಿಸಿತು. ರಾಜಸ್ಥಾನ ಶೇ.68ಕ್ಕೆ ಹೆಚ್ಚಿಸಿಕೊಳ್ಳಲು ಉದ್ದೇಶಿಸಿತ್ತು. ಮಹಾರಾಷ್ಟ್ರ ಸರ್ಕಾರ ಶೇ.21 ರಷ್ಟು ಹೆಚ್ಚಿಸಿಕೊಂಡು ಅದರಲ್ಲಿ ಶೇ.16 ನ್ನು ಮರಾಠರಿಗೆ, ಶೇ.5 ನ್ನು ಮುಸಲ್ಮಾನರಿಗೆ ನೀಡಿತ್ತು. ಬಾಂಬೆ ಉಚ್ಛ ನ್ಯಾಯಾಲಯ ಇದನ್ನು ತಳ್ಳಿಹಾಕಿತು. 2016 ರಲ್ಲಿ ಹರಿಯಾಣ ಶೇ.10 ನ್ನು ಜಾಟ್ ಮತ್ತು ಇತರೆ 5 ಜಾತಿಗಳಿಗೆ ಹಾಗೂ ಶೇ.10 ನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡಲು ಮುಂದಾಗಿತ್ತು. ಇದಕ್ಕಾಗಿ ತನ್ನ ಮೀಸಲು ಪ್ರಮಾಣವನ್ನು ಶೇ.67ಕ್ಕೆ ಹೆಚ್ಚಿಸಿಕೊಂಡಿತ್ತು. ಆದರೆ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಅನುಷ್ಟಾನಗೊಳಿಸದಂತೆ ತಡೆಯಾಜ್ಞೆ ನೀಡಿತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಮೀಸಲು ಪ್ರಮಾಣವನ್ನು ವಿಸ್ತರಿಸಿಕೊಳ್ಳಲು ಚಿಂತಿಸಿದ್ದರು.
ವಿಶ್ರಾಂತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಪ್ರಕಾರ ಶೇ.10 ರ ಮೀಸಲಾತಿಯಿಂದ ಮೇಲ್ವರ್ಗಗಳು ಅಪಾರವಾದ ಅವಕಾಶವನ್ನು ಬಾಚಿಕೊಳ್ಳುತ್ತವೆ. ಕಾರಣ, ಅವರಿಗಿರುವ ಶೈಕ್ಷಣಿಕ ಹಿನ್ನೆಲೆ, ಸಾಮಾಜಿಕ ಬಂಡವಾಳದಿಂದ ಎಲ್ಲ ಸವಲತ್ತುಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರದ ಮೇಲ್ವರ್ಗಕ್ಕೆ ಮೀಸಲಾತಿಯನ್ನು ತಿರಸ್ಕರಿಸಬೇಕಾಗುತ್ತದೆ. ಮೇಲ್ವರ್ಗದ ಬಡವರಿಗೆ ನೀಡುವ ಮೀಸಲಾತಿಯಿಂದ ಜಾತಿ ಆಧಾರಿತ ತಾರತಮ್ಯವನ್ನು ಹೋಗಲಾಡಿಸಬಹುದೆಂದು ಕೇಂದ್ರ ಸರ್ಕಾರ ಲೆಕ್ಕಾಚಾರ ಹಾಕಿದೆ. ಇಂತದ್ದೊಂದು ಯೋಜನೆಯನ್ನು ಹಿಡಿದು ಹೊರಟರೆ ಭಾರತದಲ್ಲಿರುವ ಬಹುತೇಕರು ಮೀಸಲಾತಿಗೆ ಅರ್ಹರಾಗುತ್ತಾರೆ. ಕಾರಣ, ಭಾರತದಲ್ಲಿ ಶ್ರೀಮಂತರಿಗಿಂತ ಬಡವರ ಸಂಖ್ಯೆಯೇ ಹೆಚ್ಚಾಗಿದೆ. ಬಡತನ ಜಾತಿ ನೋಡಿ ಬರುವುದಿಲ್ಲ ಎಂದು ಆರೆಸ್ಸೆಸ್ನ ದೇಶ್ ರತನ್ ನಿಗಮ್ ಹೇಳುವ ಮೂಲಕ ಆರ್ಥಿಕ ಆಧಾರಿತ ಮೀಸಲನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದೊಂದು ಪೂರ್ವಾಗ್ರಹ ಪ್ರತಿಪಾದನೆ ಎನ್ನಬಹುದು. ಏಕೆಂದರೆ ಬಡತನ ಜಾತಿ ನೋಡಿ ಬರುವುದಿಲ್ಲ ಎನ್ನುವುದು, ಮೈಸೂರು ಅರಸ ಟಿಪ್ಪು ಹಿಂದೂ ವಿರೋಧಿ ಎನ್ನುವುದು ಎರಡೂ ಮೂರ್ಖತನದಿಂದ ಕೂಡಿವೆ. ಆಕ್ಸ್ಫರ್ಡ್ನ ಬಡತನ ಮತ್ತು ಅಭಿವೃದ್ಧಿ ಉಪಕ್ರಮದ ಪ್ರಕಾರ ಭಾರತದ ಶೇ.೬೫.೮ ರಷ್ಟು ದಲಿತರು ದಿನಗೂಲಿಗಳಾಗಿಯೇ ಬದುಕು ಸವೆಸುತ್ತಿದ್ದಾರೆ. ಶೇ58.3 ರಷ್ಟು ತಳವರ್ಗದ ಜನ ಅಂದರೆ ಸಾಮಾಜಿಕವಾಗಿ ಹಿಂದುಳಿದವರು ಬಡವರಾಗಿಯೇ ಉಳಿದಿದ್ದಾರೆ. ಶೇ.33 ರಷ್ಟು ಜನ ಬಡತನದಲ್ಲಿಯೇ ಇದ್ದಾರೆ. ಹೀಗಿದ್ದರೂ ಭಾರತ ಸೂಪರ್ ಪವರ್ ಆಗುತ್ತಿದೆ. ಅಭಿವೃದ್ಧಿಯ ನಾಗಾಲೋಟದತ್ತ ಸಾಗುತ್ತಿದೆ. ಆದರೆ ಭಾರತ ಜಾತಿಗಳಿಂದ ಕೂಡಿದ ಗಣರಾಜ್ಯವಾಗಿದೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇತ್ತೀಚಿನ ಆರ್ಥಿಕತೆ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದಲ್ಲಿ, ಶೇ.10ರ ಮೀಸಲು ಏನನ್ನು ಬಗೆಹರಿಸಬಲ್ಲದು? ಉದ್ಯೋಗದ ಅವಕಾಶಗಳೇ ಹೆಚ್ಚುವುದಿಲ್ಲ ಎಂದಮೇಲೆ ಮೀಸಲಾತಿ ಇದ್ದೂ ಪ್ರಯೋಜನವಿಲ್ಲ. ಶೇ.49.5 ರ ಮೀಸಲಾತಿಯಿಂದಲೂ ಪ್ರಯೋಜನವಿಲ್ಲ. ಇದು ಮರುಭೂಮಿಯೊಂದನ್ನು ಪಾಲು ಹಾಕಿಕೊಂಡಂತಾಗಿದೆ. ಅಂದರೆ, ಎಷ್ಟೇ ಪ್ರಮಾಣದ ಮೀಸಲಾತಿ ದೊರೆತರೂ ಬೆಳೆ ಬೆಳೆಯಲು ನೀರೇ ಇಲ್ಲದಂತಾಗಿದೆ. ಭಾರತೀಯ ಆರ್ಥಿಕ ಪರಿವೀಕ್ಷಣಾ ಸಮಿತಿ ಗಮನಿಸಿದಂತೆ ಭಾರತ2018 ರಲ್ಲಿ 11 ಮಿಲಿಯನ್ ಉದ್ಯೋಗಗಳನ್ನು ಕಳೆದುಕೊಂಡಿದೆ. ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಗಳಲ್ಲಿ ಹಾಗೂ ಕೈಗಾರಿಕಾ ಸ್ಥಾವರಗಳಲ್ಲಿ ಉದ್ಯೋಗದ ಅವಕಾಶಗಳನ್ನು ಕಳೆದುಕೊಳ್ಳಲಾಗಿದೆ. ನರೇಗಾ ಯೋಜನಾ ವೆಚ್ಚವನ್ನು ೫೫ ಸಾವಿರ ಕೋಟಿಯಿಂದ65 ಸಾವಿರ ಕೋಟಿಗೆ ಏರಿಸಿದರೂ ಅಗತ್ಯವಾದ ಬೇಡಿಕೆ ಈಡೇರಿಲ್ಲ. ಹೀಗಿರುವಾಗ ಮೀಸಲಾತಿ ಎಂಬುದು ಭರವಸೆ ಮಾತ್ರವಾಗಿದೆ. ಖಾಸಗಿ ವಲಯದ ಉದ್ಯೋಗದಲ್ಲೂ ಮೀಸಲು ನಿಗದಿಪಡಿಸದಿದ್ದಲ್ಲಿ ಮೀಸಲಾತಿಗೆ ನೆಲೆಯೇ ಇರುವುದಿಲ್ಲ. ಇದನ್ನು ಮೊದಲಿಗೆ ಕೇಂದ್ರ ಸರ್ಕಾರ ಮಾಡಬೇಕಿತ್ತು.