ಚಿಕ್ಕಮಗಳೂರು : ಶಿಕ್ಷಕ ಸಮುದಾಯ ಸೇವಾ ಮತ್ತು ಅರ್ಪಣಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಮೂಲಕ ಭಾರತ ಸೇವಾದಳವನ್ನು ಉಳಿಸಿ ಬೆಳೆಸಬೇಕು ಎಂದು ಮಾಜಿ ಶಾಸಕ ಐ.ಬಿ.ಶಂಕರ್ ಮನವಿ ಮಾಡಿದರು.
ನಗರದ ಆಜಾದ್ ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಂಗಳವಾರ ನಡೆದ ಭಾರತ ಸೇವಾದಳದ ಶಿಕ್ಷಕರ ಮಿಲಾಪ್ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸೇವಾದಳ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶಭಕ್ತರನ್ನು ಹುಟ್ಟು ಹಾಕಿದ ಸಂಸ್ಥೆ, ಸ್ವಾತಂತ್ರ್ಯ ಚಳುವಳಿಯಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರಿಗೆ ಸಾತ್ ಕೊಟ್ಟ ಏಕೈಕ ಸಂಸ್ಥೆ ಎಂದರು.
ಭಾರತ ಸೇವಾದಳಕ್ಕೆ ಶಿಕ್ಷಕರೇ ಅಡಿಗಲ್ಲು ಅದನ್ನು ಉಳಿಸಿ ಬೆಳೆಸುವುದು ಅವರಿಂದ ಮಾತ್ರ ಸಾಧ್ಯ ಎಂದ ಅವರು ಶಿಕ್ಷಕ ವೃಂದ ಆ ಹೊಣೆಗಾರಿಕೆಯನ್ನು ಹೊರಬೇಕು, ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸೇವಾದಳದ ಶಾಖೆಗಳನ್ನು ಎಲ್ಲಾ ಶಾಲೆಗಳಲ್ಲೂ ತೆರೆಯಬೇಕು ಆ ಮೂಲಕ ಇಂದಿನ ಪೀಳಿಗೆಯಲ್ಲಿ ದೇಶಭಕ್ತಿ. ರಾಪ್ಟ್ರಪ್ರೇಮ ಶಿಸ್ತನ್ನು ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ತಾಲ್ಲೂಕು ಕ್ರೀಡಾಧಿಕಾರಿ ರವಿಕುಮಾರ್ ಮಾತನಾಡಿ ಸೇವಾದಳದ ಶಿಕ್ಷಕರು ಮಕ್ಕಳಲ್ಲಿ ರಾಷ್ಟ್ರಭಕ್ತಿ, ದೇಶಪ್ರೇಮ, ಶಿಸ್ತು, ಸೇವಾಮನೋಭಾವ ಮತ್ತು ನಾಯಕತ್ವ ಗುಣವನ್ನು ಬೆಳೆಸುವ ಮೂಲಕ ದೇಶವನ್ನು ಅಭಿವೃದ್ದಿ ಪಡಿಸಬೇಕು ಎಂದು ಸಲಹೆ ಮಾಡಿದರು.
ಭಾರತ ಸೇವಾದಳದ ತಾಲ್ಲೂಕು ಅಧ್ಯಕ್ಷ ಬಿ.ಆರ್.ಜಗದೀಶ್ ಮಾತನಾಡಿ ಶಿಕ್ಷಕರು ಭಾರತ ಸೇವಾದಳವನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆಯನ್ನು ಹೊತ್ತರೆ ಮಾತ್ರ ಆ ಸಂಸ್ಥೆ ಮುಂದಿನ ಪೀಳಿಗೆಗೆ ಉಳಿಯುತ್ತದೆ ಎಂದು ಹೇಳಿದರು.
ಭಾರತ ಸೇವಾದಳದ ಮಾಜಿ ದಳಪತಿ ಶಿವಕುಮಾರ್ ಮತ್ತು ಇತ್ತೀಚೆಗೆ ನಡೆದ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾದ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್ವರಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಖಜಾಂಚಿ ಜಗದೀಶಾಚಾರ್, ಜಿಲ್ಲಾ ಸಂಘಟಕ ಚಂದ್ರಕಾಂತ್, ಸದಸ್ಯ ಶಾಂತಕುಮಾರ್, ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ, ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕಾಳಯ್ಯ ಉಪಸ್ಥಿತರಿದ್ದರು.
ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಶಿಕ್ಷಕರಾದ ಪುಂಡರೀಕ ಸ್ವಾಗತಿಸಿದರು, ಶಂಕರೇಗೌಡ ವಂದಿಸಿದರು.











