ಬೆಂಗಳೂರು : ಅನರ್ಹ ಶಾಸಕರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ರಾಜರಂತೆ ಮೆರೆಯುತ್ತಿದ್ದರು. ಆದರೆ ಈಗಾ ಬಿಜೆಪಿಯವರ ಮುಂದೆ ಭಿಕ್ಷೆ ಬೇಡುತ್ತಿದ್ದಾರೆ ಎಂಬ ದಿನೇಶ್ ಗುಂಡೂರಾವ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಅನರ್ಹ ಶಾಸಕ ಕೆ. ಸುಧಾಕರ್ ಅವರು ಸರಣಿ ಟ್ವೀಟ್ ಮಾಡುವ ದಿನೇಶ್ ಗುಂಡೂರಾವ್ ಅವರ ವಿರುದ್ದ ಕಿಡಿಕಾರಿದ್ದು, “ಮಾನ್ಯ ದಿನೇಶ್ ಗುಂಡೂರಾವ್ ಅವರೇ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ನಾವು ಭಿಕ್ಷುಕರಲ್ಲ. ನಿಮ್ಮ ವೈಯಕ್ತಿಕ ಆಸೆ, ಲಾಲಸೆ ಮತ್ತು ಕೆಟ್ಟ ನಿರ್ಧಾರಗಳಿಂದ ಒಂದು ಸಣ್ಣ ಪಕ್ಷದ ಎದುರು ಭಿಕ್ಷೆ ಬೇಡುವ ಪರಿಸ್ಥಿತಿ ಕಾಂಗ್ರೆಸ್ ಪಕ್ಷಕ್ಕೆ ಬಂದಿತು. ನಾವು ವಿಧಾನಸಭೆ ಚುನಾವಣೆಯಲ್ಲಿ 80 ಸ್ಥಾನಗಳನ್ನು ಗೆದ್ದಿದ್ದೆವು. ಆದರೆ ಲೋಕಸಭೆ ಚನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಒಂದೇ ಒಂದು ಸ್ಥಾನಗೆದ್ದಿತು. ಇತಿಹಾಸದಲ್ಲೇ ಇಂತಹ ಮುಖಭಂಗ ಕಾಂಗ್ರೆಸ್ ಪಕ್ಷಕ್ಕೆ ಎಂದೂ ಆಗಿರಲಿಲ್ಲ. ನಿಮ್ಮ ಕೆಟ್ಟ ನಿರ್ಧಾರ ಹಾಗೂ ಬಲ ಹೀನತೆ ಬಗ್ಗೆ ಪರಾಮರ್ಶಿಸಿಕೊಳ್ಳಿ. ನಿಮ್ಮ ಈ ವರ್ತನೆಯಿಂದ ಕಾಂಗ್ರೆಸ್ ಪಕ್ಷ ಭಿಕ್ಷಾಪಾತ್ರೆ ಹಿಡಿದು ಹೋಗುವಂತಾಯಿತು. ನಿಮ್ಮ ಈ ಭಿಕ್ಷಾ ವರ್ತನೆಯಿಂದ ನಾವು ಹೊರಬಂದು ಇವತ್ತು ರಾಜರಂತಿದ್ದೇವೆ. ‘ಮೂರು’ ಇದ್ದವರು ಆ ಸ್ಥಾನದಲ್ಲಿ ಒಂದೇ ಒಂದು ಕ್ಷಣವು ಕೂರಬಾರದು ಎಂದು ಕಿಡಿಕಾರಿದ್ದಾರೆ.










