ಮೂಡಿಗೆರೆ : ಕೇಂದ್ರ ಸರ್ಕಾರದ ಕಾರ್ಮಿಕ ನೀತಿಗೆ ವಿರೋಧ ವ್ಯಕ್ತಪಡಿಸಿ ಕಾರ್ಮಿಕ ಸಂಘಟನೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಪಟ್ಟಣದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕಾರ್ಮಿಕ ಸಂಘಟನೆಗಳಿಂದ ಮುಷ್ಕರ ಭಾರತ್ ಬಂದ್ ಹಿನ್ನೆಲೆಯಿಂದಾಗಿ ಪಟ್ಟಣದಾದ್ಯಂತ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಪ್ರತಿಭಟನೆಗಳಿಗೆ ಪೋಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲವಾದ್ದರಿಂದ ಯಾವುದೇ ಪ್ರತಿಭಟನೆಗಳು ನಡೆಯಲಿಲ್ಲ. ಮೂಡಿಗೆರೆ ಪಟ್ಟಣ ಸೇರಿದಂತೆ ಬಣಕಲ್, ಗೋಣಿಬೀಡು, ಕಳಸ ಸೇರಿದಂತೆ ಹಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ತಾಲ್ಲೂಕು ಕೇಂದ್ರ ಬಹುತೇಕ ಯಥಾ ಸ್ಥಿತಿಯಲ್ಲಿತ್ತು. ಬಂದ್‍ಗೆ ಕೆಲವು ಹೋಟೆಲ್ ಮಾಲೀಕರು ಕೇವಲ ಬಾಹ್ಯ ಬೆಂಬಲ ವ್ಯಕ್ತಪಡಿಸಿದ್ದು, ಹೋಟೆಲ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ತಾಲ್ಲೂಕಿನಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಇಲ್ಲ ಎಂದು ತಹಶೀಲ್ದಾರ್ ಹೆಚ್.ಎಂ.ರಮೇಶ್ ಅವರು ಮುಂಚಿತವಾಗಿಯೇ ಸ್ಪಷ್ಟೀಕರಣ ನೀಡಿದ್ದರಿಂದ ಶಾಲಾ ಕಾಲೇಜುಗಳು ಕಾರ್ಯನಿರ್ವಹಿಸಿದವು. ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, ಆಟೋಗಳು ಸೇರಿದಂತೆ ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ಬ್ಯಾಂಕುಗಳು ಸಹ ಕಾರ್ಯ ನಿರ್ವಹಿಸಿದವು. ಹಾಲಿನ ಡೈರಿ, ಮೆಡಿಕಲ್ ಹಾಗೂ ಆಸ್ಪತ್ರೆಗಳ ಸೇವೆಗಳು ನಿರಾತಂಕವಾಗಿ ನಡೆದವು. ಒಟ್ಟಾರೆ ಯಾವುದೇ ಅಹಿತಕರ ಘಟನೆಗಳು ನಡೆಯದೆ, ಸಹಜವಾಗಿ ಜನಜೀವನ ಸಾಗಿತು.










