ಮೂಡಿಗೆರೆ : ಪವರ್ ಲಿಪ್ಟಿಂಗ್‍ನಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆ- ಅಥ್ಲೆಟಿಕ್ಸ್, ಕಬಡ್ಡಿಯಲ್ಲಿ ನಿಡುವಾಳೆಯ ಐಶ್ವರ್ಯ ಉತ್ತಮ ಸಾಧನೆ…

1620
firstsuddi

ಮೂಡಿಗೆರೆ : ಇತ್ತೀಚಿನ ದಿನಗಳಲ್ಲಿ ಮಲೆನಾಡಿನ ಭಾಗದ ವಿದ್ಯಾಥಿಗಳು ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಿ ಹೆಸರು ಪಡೆಯುತ್ತಿದ್ದಾರೆ. ಅಂತಹವರ ಸಾಲಿಗೆ ಬಾಳೂರು ಹೋಬಳಿಯ ನಿಡುವಾಳೆ ಗ್ರಾಮದ ವಿದ್ಯಾರ್ಥಿನಿ ಐಶ್ವರ್ಯ ಸೇರ್ಪಡೆಯಾಗಿದ್ದಾಳೆ. ಬಡತನ ಹಾಗೂ ಶಿಕ್ಷಣದ ನಡುವೆಯೂ ಅವಿರತ ಶ್ರಮದಿಂದ ಕ್ರೀಡಾ ಕ್ಷೇತ್ರದಲ್ಲಿ ಅಲ್ ರೌಂಡರ್ ಆಗಿ ಸಾಧನೆ ಮಾಡುತ್ತಿರುವ ಪ್ರತಿಭಾವಂತೆ ತನ್ನ ಸಾಧನೆಯಿಂದಾಗಿ ಎಲ್ಲರ ಪ್ರಶಂಸೆಗೆ ಕಾರಣಳಾಗಿದ್ದಾಳೆ.
ಬಿ.ಎ.ವಿದ್ಯಾರ್ಥಿನಿ ಐಶ್ವರ್ಯ ನಿಡುವಾಳೆಯ ಸಂಪಿಗೆಖಾನ್ ಮೋನಪ್ಪ ಹಾಗೂ ಗುಲಾಬಿಯ ಅವರ ಪುತ್ರಿ. ತಾಯಿ ಗುಲಾಭಿ ಅವರು ಉಡುಪಿಯಲ್ಲೇ ನಿಂತು ಮಗಳ ಶಿಕ್ಷಣಕ್ಕೆ ಆಸರೆಯಾಗಿದ್ದಾರೆ. ಬಡತನದಲ್ಲಿದ್ದರೂ ಶಿಕ್ಷಣದ ಜೊತೆ ಮೇಲುಗೈ ಸಾಧಿಸುತ್ತಿರುವ ಐಶ್ವರ್ಯ ಸದ್ಯ ಉಡುಪಿ ಅಜ್ಜರಕಾಡು ಬನ್ನಂಜೆ ಹಾಸ್ಟೆಲ್‍ನಲ್ಲಿ ನಿಂತು ಬಿಎ ವ್ಯಾಸಂಗ ಮಾಡುತ್ತಿದ್ದಾರೆ. ಕ್ರೀಡಾಲೋಕದ ಪವರ್ ಲಿಫ್ಟಿಂಗ್‍ನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದರೆ, ಮಂಗಳೂರು ಅಂತರ್ ವಿವಿ ಅಥ್ಲೆಟಿಕ್ಸ್ ನಲ್ಲಿ ಹಾಗೂ ಕಬಡ್ಡಿ ಟೂರ್ನಿಯಲ್ಲಿ ಪ್ರತಿಭೆಯನ್ನು ಬೆಳಗಿಸಿ ಹಲವು ಪದಕ ಮತ್ತು ಟ್ರೋಪಿಗಳನ್ನು ತೆರೆಮರೆಯಲ್ಲೇ ಮುಡಿಗೇರಿಸಿಕೊಂಡಿದ್ದಾರೆ.
ಪವರ್ ಲಿಪ್ಟಿಂಗ್‍ನಲ್ಲಿ ಆರು ತಿಂಗಳು ಕೋಚಿಂಗ್ ಪಡೆದು 2018ರಲ್ಲಿ ಬಂಟ್ವಾಳದಲ್ಲಿ ನಡೆದ ರಾಜ್ಯ ಮಟ್ಟದ ಪವರ್ ಲಿಪ್ಟಿಂಗ್‍ನ 52 ಕೆ.ಜಿ.ಸಬ್ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕ, 2019 ಜನವರಿಯಲ್ಲಿ ಪದುಚ್ಚೇರಿಯಲ್ಲಿ ನಡೆದ ರಾಷ್ಟ್ರಮಟ್ಟದ (ದಕ್ಷಿಣವಲಯ)ಪವರ್ ಲಿಪ್ಟಿಂಗ್‍ನಲ್ಲಿ 52ಕೆಜಿ ಜ್ಯೂನಿಯರ್ ವಿಭಾಗದಲ್ಲಿ ಬೆಳ್ಳಿ, ಸಬ್ ಜ್ಯೂನಿಯರ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಡಿಸೆಂಬರ್ ಮಾಹೆಯಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ 52 ಕೆಜಿ ಬೆಂಚ್‍ಪ್ರೆಸ್‍ನಲ್ಲೂ ಚಿನ್ನದ ಪದಕ ಪಡೆದರು. ಪವರ್ ಲಿಪ್ಟಿಂಗ್ ಸಾಧನೆಗೆ ಕೋಚ್ ರಘುನಾಥ್ ಶೆಟ್ಟಿ ಉತ್ತಮ ತರಬೇತಿ ನೀಡುತ್ತಿದ್ದಾರೆ. ಕಾಲೇಜಿನ ಪಿಡಿ ರೋಶನ್ ಶೆಟ್ಟಿ ಸಾಕಷ್ಟು ಬೆಂಬಲ ಮಲೆನಾಡಿನ ಪ್ರತಿಭೆಗೆ ನೀಡುತ್ತಿದ್ದಾರೆ. ಅಥ್ಲೆಟಿಕ್ಸ್ ನಲ್ಲಿ ಐಶ್ವರ್ಯಗೆ ಶಾಲಿನಿ ಶೆಟ್ಟಿ ಕೋಚ್ ನೀಡಿದರೆ,ಕಬಡ್ಡಿಗೆ ಅನಿಲ್‍ಕುಮಾರ್ ಉದ್ಯಾವರ ತರಬೇತಿ ಹಾಗೂ ಹಾಸ್ಟೆಲಿನ ಮೇಲುಸ್ತುವಾರಿ ಎಸ್. ಸುಚಿತ್ರಾ ಅವರ ಪ್ರೋತ್ಸಾಹ ಕ್ರೀಡಾ ಸಾಧನೆಗೆ ಉತ್ತಮ ಪ್ರೇರಣೆಯಾಗಿದೆ ಎನ್ನುತ್ತಾರೆ ಕ್ರೀಡಾಪಟು ಐಶ್ವರ್ಯ.
ಐಶ್ವರ್ಯ ಓಟ, ಎತ್ತರ ಜಿಗಿತ, ಉದ್ದಜಿಗಿತ, ಸೇರಿದಂತೆ ಅತ್ಲೆಟಿಕ್ಸ್‍ನಲ್ಲೂ ಸಾಧನೆ ಮಾಡುತ್ತಿರುವುದು ಮಲೆನಾಡಿಗೆ ಹಿರಿಮೆ ತಂದಿದೆ. ಮಂಗಳೂರಿನ ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಹೆಪ್ಟತ್ಲಾನ್‍ನಲ್ಲಿ 2434 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ಇತರೆ ಸಂಘ ಸಂಸ್ಥೆಗಳು ಆಯೋಜಿಸುವ ಮ್ಯಾರಾಥಾನ್‍ನಲ್ಲೂ ಭಾಗವಹಿಸಿ ಹಲವು ಬಹುಮಾನ ಗೆದ್ದಿದ್ದಾರೆ. ಸಮರ್ಥ ಕಬಡ್ಡಿ ತಂಡದ ನಾಯಕಿಯಾಗಿಯೂ ಉತ್ತಮ ಆಟಗಾರ್ತಿಯಾಗಿರುವ ಇವರು ಸದ್ಯ ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜು ತಂಡದ ನಾಯಕಿಯಾಗಿದ್ದಾರೆ. 2019-20ನೇ ಸಾಲಿನ ಅಂತರ್ ಕಾಲೇಜು ಕಬಡ್ಡಿ ಟೂರ್ನಿಯ ಟ್ರೋಪಿ ಐಶ್ವರ್ಯ ನಾಯಕತ್ವದ ತಂಡ ಮುಡಿಗೇರಿಸಿರುವುದು ಇವರ ಸಮರ್ಥ ನಾಯಕತ್ವದ ಹೊಣೆಗಾರಿಕೆಯ ಕೈಗನ್ನಡಿಯಾಗಿದೆ. ಇತ್ತೀಚೆಗೆ ಹೈದರಾಬಾದ್‍ನ ತೆಲಂಗಾಣದಲ್ಲಿ ಪವರ್‍ಲಿಫ್ಟಿಂಗ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದು ಕೀರ್ತಿ ಪಡೆದಿದ್ದಾರೆ.
ಮಲೆನಾಡಿನ ಈ ಪ್ರತಿಭೆಗೆ ಸರಕಾರದಿಂದ ಉತ್ತಮ ಪ್ರೋತ್ಸಾಹ ಮತ್ತು ಸಹಕಾರ ಸಿಕ್ಕಿದಲ್ಲಿ ಕ್ರೀಡಾಕ್ಷೇತ್ರದಲ್ಲಿ ಹಾಗೂ ಒಲಂಪಿಕ್ಸ್ ನಂಥಹ ಪಂದ್ಯಾವಳಿಗಳಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡುವ ಆಸೆ ಈ ಹುಡುಗಿಯದ್ದು. ಈಕೆಗೆ ಕ್ರೀಡೆಗೆ ಸಾಗಲು ಸರಕಾರ ಆರ್ಥಿಕ ನೆರವಿನ ಅಗತ್ಯವಿದೆ. ಬಡತನದ ಕುಟುಂಬದಲ್ಲಿ ಮನೆಯ ಕಡೆಯೂ ಜವಾಬ್ದಾರಿ ವಹಿಸುವ ಬಹು ದೊಡ್ಡ ಜವಾಬ್ದಾರಿ ಕೂಡ ಆಕೆಯ ಮೇಲಿದೆ. ಗ್ರಾಮೀಣ ಭಾಗದ ಪ್ರತಿಭೆಗೆ ಸರಕಾರದಿಂದ ಸೂಕ್ತ ಪ್ರೋತ್ಸಾಹ ಸಿಗಲಿ ಎಂಬುವುದೇ ಕ್ರೀಡಾಸಕ್ತರ ಮತ್ತು ಸ್ಥಳೀಯರ ಹಾರೈಕೆಯಾಗಿದೆ.