ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ನಡುವೆ ಆಗಸ್ಟ್ 24ರಂದು ಕೆಪಿಎಸ್‍ಸಿ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದು, ಇದನ್ನು ಕೂಡಲೇ ಮುಂದೂಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒತ್ತಾಯಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷ ಎಲ್ಲ ನೇಮಕಾತಿ ಹುದ್ದೆಗಳ ಭರ್ತಿಯನ್ನು ತಡೆಹಿಡಿಯಬೇಕೆಂದು ಸರ್ಕಾರದ ಸುತ್ತೋಲೆಯ ಹೊರತಾಗಿಯೂ ಕೆಪಿಎಸ್ಸಿ ತರಾತುರಿಯಲ್ಲಿ ಕೆಎಎಸ್ ಪೂರ್ವಭಾವಿ ಪರೀಕ್ಷೆ ನಡೆಸಲು ಹೊರಟಿರುವುದು ಅನುಮಾನಕ್ಕೆ ಕಾರಣವಾಗಿದೆ. ರಾಜ್ಯದ 6 ಜಿಲ್ಲೆಗಳಲ್ಲಿ ಮಾತ್ರ ಕೆಪಿಎಸ್ಸಿ ಪರೀಕ್ಷಾ ಕೇಂದ್ರಗಳಿವೆ. ಕೊರೊನಾ ಸೋಂಕಿನ ಈ ದಿನಗಳಲ್ಲಿ 30 ಜಿಲ್ಲೆಗಳ ಅಭ್ಯರ್ಥಿಗಳ ಪ್ರಯಾಣ ಮತ್ತು ವಾಸ್ತವ್ಯ ಬಹಳ ಅಪಾಯಕಾರಿ. ಈ ಎಲ್ಲ ಅಂಶಗಳನ್ನು ಗಮನಿಸಿ, ಕೆಪಿಎಸ್ಸಿ ನಡೆಸುವ ಆಗಸ್ಟ್ 24ರ ಪರೀಕ್ಷೆಯನ್ನು ಮುಂದೂಡಬೇಕೆಂದು ಒತ್ತಾಯಿಸುತ್ತಿದ್ದೇನೆ. ಕೆಪಿಎಸ್ಸಿ ಪರೀಕ್ಷೆಯ ಅಭ್ಯರ್ಥಿಗಳಲ್ಲಿ 20% ಸರ್ಕಾರಿ ನೌಕರರಿದ್ದಾರೆ. ಇವರೆಲ್ಲ ಕಡ್ಡಾಯ ಕೊರೊನಾ ವಾರಿಯರ್ ಆಗಿ ಕೆಲಸ ಮಾಡ್ತಿದ್ದಾರೆ. ಇವರಲ್ಲಿ ಯಾರಿಗಾದರೂ ಕೊರೊನಾ ಸೋಂಕಿದ್ದರೆ ಉಳಿದವರಿಗೂ ಹರಡುವ ಸಾಧ್ಯತೆ ಇಲ್ಲವೇ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಕ್ಷಣ ಗಮನ ಹರಿಸಿ ಕೆಪಿಎಸ್ಸಿ ಪರೀಕ್ಷೆ ಮುಂದೂಡಬೇಕು” ಎಂದು ಟ್ವೀಟ್ ಮಾಡಿದ್ದಾರೆ.










