ಬೆಂಗಳೂರು : ಉಪಚುನಾವಣೆಗೆ ಅಭ್ಯರ್ಥಿಯ ಗತಿ ಇಲ್ಲದೆ JDSನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ . ಈ ಕುರಿತು ಟ್ವೀಟ್ ಮಾಡಿರುವ ಅವರು, JDSನಿಂದ ಪ್ರವರ್ದಮಾನಕ್ಕೆ ಬಂದಿದ್ದ, JDSನಿಂದಲೇ ಡಿಸಿಎಂ ಆದ ನಾಯಕರೊಬ್ಬರು, ಸಭೆಯೊಂದರಲ್ಲಿ JDS ಮುಖಂಡರನ್ನು ತಮ್ಮ ಈಗಿನ ಪಕ್ಷಕ್ಕೆ ಸೇರಿಸಿಕೊಳ್ಳುತ್ತಾ ಅದೇ JDS ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. JDS ರಾಜಕೀಯ ಪಕ್ಷವಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆಗೆ ಅಭ್ಯರ್ಥಿಯ ಗತಿ ಇಲ್ಲದೆ JDSನವರನ್ನು ಸೆಳೆದ ನಿಮ್ಮದು ರಾಜಕೀಯ ಪಕ್ಷವೇ?
ಭಾರತದ ಅತಿ ಹಳೆಯ ರಾಜಕೀಯ ಪಕ್ಷವಾಗಿರುವ ಕಾಂಗ್ರೆಸ್ ಇಂದು ಯಾವ ಪರಿಸ್ಥಿತಿಯಲ್ಲಿದೆ, ಯಾವ ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡಿದೆ? ಎಲ್ಲೆಲ್ಲಿ ಯಾರು ಯಾರ ಹೆಗಲ ಮೇಲೆ ಕುಳಿತು ರಾಜಕೀಯ ಮಾಡುತ್ತಿದೆ? ಎಲ್ಲಿಲ್ಲಿ ಯಾರು ಯಾರಿಗೆ ಹೆಗಲಾಗಿದೆ? ಜೆಡಿಎಸ್ ಉಪ್ಪು ತಿಂದ ಆ ಮಹಾನ್ ನಾಯಕರು ಈ ಪ್ರಶ್ನೆಗಳಿಗೆ ಉತ್ತರ ನೀಡುವರೇ?
ಮಿತ್ರಪಕ್ಷಗಳನ್ನೇ ಆಪೋಷನ ಪಡೆದು ಜೀವಿಸುತ್ತಿರುವ, ಜನರಿಂದ ತಿರಸ್ಕಾರವಾಗಿರುವ, ಇತರ ಪಕ್ಷಗಳೊಂದಿಗೆ ಚೌಕಾಸಿಯಲ್ಲಿ ತೊಡಗಿರುವ ಕಾಂಗ್ರೆಸ್ ಭಾರತದಲ್ಲಿ ರಾಜಕೀಯ ಪಕ್ಷವಾಗಿ ಉಳಿದಿದೆಯೇ? ಕಾಂಗ್ರೆಸ್ ತನ್ನ ಅಹಂಕಾರದ ಪ್ರವೃತ್ತಿ ಮುಂದುವರಿಸಿಕೊಂಡು ಹೋದರೆ ಕರ್ನಾಟಕದಲ್ಲೂ ನೆಲೆ ಕಳೆದುಕೊಳ್ಳುವುದರಲ್ಲಿ ಅನುಮಾನಗಳಿಲ್ಲ.
2018ರ ಚುನಾವಣೆಯಲ್ಲಿ ‘ಮಹಾನ್ ನಾಯಕರ’ ‘ಅಪ್ಪನಾಣೆ’ ‘ತಿಪ್ಪರಲಾಗ’ದ ಸವಾಲುಗಳನ್ನು ಜನ ಸೋಲಿಸಿದ್ದಾರೆ. ಆ ಪಕ್ಷ ಅಧಿಕಾರಕ್ಕೆ ಬಾರದು, ಈ ಪಕ್ಷ ಅಧಿಕಾರಕ್ಕೆ ಬಾರದು ಎಂದು ‘ಅಪ್ಪನಾಣೆ’ಗಳನ್ನು ಇಟ್ಟವರಿಗೆ ಜನ, ಆಣೆ ಪ್ರಮಾಣದ ಮಹತ್ವ ತಿಳಿಸಿಕೊಟ್ಟಿದ್ದಾರೆ. ಈ ಉಪ ಚುನಾವವಣೆಯಲ್ಲೂ ಅವರಿಗೆ ತಕ್ಕ ಉತ್ತರ ಸಿಗಲಿದೆ. ಅದಕ್ಕಾಗಿ ಕಾಯಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.










