ವರದಿ : ರಾಮಚಂದ್ರ ಮರಿಯಮ್ಮನಹಳ್ಳಿ
ಹೊಸಪೇಟೆ : ಸ್ತ್ರೀ ಸಧೃಡಳಾದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಹಿರಿಯ ವೈದ್ಯೆ ಡಾ.ಸುಲೋಚನ ಅಭಿಪ್ರಾಯಪಟ್ಟರು.
ಅವರು ಹೊಸಪೇಟೆ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಜನನಿ ಮಹಿಳಾ ಸಬಲೀಕರಣ ಸಮಿತಿ ಪದಾಧಿಕಾರಿಗಳ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ನವಜಾತ ಶಿಶುವಿಗೆ ಹಾಲುಣಿಸುವುದರ ಮೂಲಕ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.
ಸ್ತ್ರೀಯರು ಬೌದ್ಧಿಕವಾಗಿ, ದೈಹಿಕ, ಆರ್ಥಿಕ, ಸಾಮಾಜಿಕ, ಸಾಂಸ್ಕøತಿಕ ಹಾಗೂ ರಾಜಕೀಯವಾಗಿ ಸಧೃಡರಾದಾಗ ಮಹಿಳಾ ಸಬಲೀಕರಣ ತಾನಾಗಿಯೇ ಆಗುತ್ತದೆ. ಭ್ರೂಣ ಹತ್ಯೆ, ಲಿಂಗ ತಾರತಮ್ಯ, ಲೈಂಗಿಕ ಅತ್ಯಾಚಾರ, ಕೌಟುಂಬಿಕ ಶೋಷಣೆಗಳಿಂದ ಸ್ತ್ರೀ ಮುಕ್ತಳಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಪ್ರಾಸ್ತಾವಿಕ ಮಾತನಾಡಿದ ಸಂದೀಪ್ ಸಿಂಗ್, ಮಹಿಳೆಯರು ಜೀವನ ನಿರ್ವಹಣೆಯಲ್ಲಿ ತುಂಬ ಆರ್ಥಿಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಹಲವು ಮಹಿಳೆಯರಿಗೆ ಸರಕಾರದ ಸವಲತ್ತುಗಳನ್ನು ಕೊಡಿಸುವಲ್ಲಿ ಶ್ರಮಿಸಲು ಸಮಿತಿಯನ್ನು ರಚಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜನನಿ ಮಹಿಳಾ ಸಮಿತಿ ಅಧ್ಯಕ್ಷೆ ನಾಗವೇಣಿ ಹಂಪಿ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜಮ್ಮಜೋಗತಿ, ಸಮಿತಿಗೆ ಕಾರಣೀಭೂತರಾದ ಗುಜ್ಜಲ ಲಕ್ಷ್ಮಿ, ತಾ.ಪಂ.ಹೊಸಪೇಟೆ ಅಧ್ಯಕ್ಷೆ ನಾಗವೇಣಿ ಬಸವರಾಜ, ಟಿ.ಎಚ್.ಒ ಭಾಸ್ಕರ, ಆರೋಗ್ಯ ಇಲಾಖೆಯ ಧರ್ಮನಗೌಡ, ದೊಡ್ಡಮನಿ, ಡಾನ್ ಬಾಸ್ಕೋ ಪಾಧರ್ ಅನಂತ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಅಮಾಜಿ ಹೇಮಣ್ಣ, ಕರುನಾಡ ಕಲಿಗಳ ಕ್ರಿಯಾ ಸಮಿತಿ ಅಧ್ಯಕ್ಷ ಪಿ.ವೆಂಕಟೇಶ್, ದೇವದಾಸಿ ವಿಮೋಚನ ಸಂಘದ ದೇವಮ್ಮ ರಾಮಸಾಗರ, ಬಳ್ಳಾರಿಯ ಸುಗುಣ ಹಾಗೂ ಇತರರು ಇದ್ದರು. ಸಮಿತಿಯ ಮಂಜುಳಾ, ಸ್ವಾತಿಸಿಂಗ್, ಸ್ವಾಗತವನ್ನು ಶಾರದ ಕುಲಕರ್ಣಿ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ನೆರವೇರಿತು.










