– ಡಾ|| ಎಂ.ಎಸ್. ಮಣಿ
ಕರ್ನಾಟಕ ಆಧ್ಯಮ ಅಕಾಡೆಮಿ ರಾಷ್ಟೀಯ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಕೋವಿಡ್-19 ಮಾಧ್ಯಮಗಳ ಪಾತ್ರ ಮತ್ತು ಪ್ರಭಾವ ಮಿಂಚಿಚ್ವಾರ ವಿಚಾರ ಸಂಕಿರಣ ಹಮ್ಮಿಕೊಂಡಿತ್ತು. ಲಾಕ್ಡೌನ್ ಘೋಷಣೆ ಆದಾಗಿನಿಂದ, ಇಂದಿನ ವರೆಗೂ ಪತ್ರಕರ್ತರು ಎದುರಿಸಿದ ಸವಾಲು–ಸಮಸ್ಯೆ, ಹೊರಬೇಕಿದ್ದ ಜವಾಬ್ದಾರಿ, ತೋರಬೇಕಿದ್ದ ಇಚ್ಛಾಶಕ್ತಿಗಳ ಬಗ್ಗೆ ಪಬ್ಲಿಕ್ ವಾಹಿನಿಯ ಮುಖ್ಯಸ್ಥ ರಂಗನಾಥ್, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ, ಕೆ.ಯು. ಡಬ್ಲ್ಯೂ.ಜೆ. ಅಧ್ಯಕ್ಷ ಶಿವಾನಂದ ತಗಡೂರು, ಹಿರಿಯ ಪತ್ರಕರ್ತ ಶೇಷಚಂದ್ರಿಕಾ ಅವರುಗಳು ಎಳೆ ಎಳೆಯಾಗಿ ಬಿಡಿಸಿಟ್ಟರು. ಅದರಲ್ಲೂ ಬೆಂಗಳೂರು ಪ್ರೆಸ್ ಕ್ಲಬ್ನ ಅಧ್ಯಕ್ಷರಾದ ಸದಾಶಿವ ಶೆಣೈ ಅವರು “ಸೈನಿಕರು ಯುದ್ಧವನ್ನು ಎದುರಿಸಿದಂತೆ ಕೊರೋನಾವನ್ನು ಪತ್ರಕರ್ತರು ಸಮರ್ಥವಾಗಿ ಎದುರಿಸಿದ್ದಾರೆ. ಇದರಲ್ಲಿ ಹಲವು ಪತ್ರಕರ್ತ ಮಿತ್ರರು ತಮ್ಮ ಜೀವವನ್ನೇ ಬಲಿ ಕೊಟ್ಟಿದ್ದಾರೆ. ಹೀಗೆ ಮೃತಪಟ್ಟ ಪತ್ರಕರ್ತರಿಗೆ ಶ್ರದ್ಧಾಂಜಲಿ ಸಮರ್ಪಿಸುತ್ತೇನೆ. ಪತ್ರಕರ್ತರನ್ನು `ಕೊರೋನಾ ವಾರಿಯರ್ಸ್’ ಎಂದು ಘೋಷಿಸಲು ಮತ್ತೊಮ್ಮೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಒತ್ತಾಯಿಸುವೆ. ಲಾಕ್ಡೌನ್ ಸಂದರ್ಭದಲ್ಲಿ ಸುಮಾರು ರೂ. 25 ಲಕ್ಷದಷ್ಟು ಧವಸ–ಧಾನ್ಯಗಳನ್ನು ಆಹಾರ ಸಚಿವ ಗೋಪಾಲಯ್ಯ ಅವರ ಮೂಲಕ ತರಿಸಿ ಪತ್ರಕರ್ತರಿಗೆ ವಿತರಿಸಲಾಗಿತ್ತು. ಪತ್ರಕರ್ತರಿಗೆ ಆರೋಗ್ಯನಿಧಿಯ ಅಗತ್ಯ ಇದೆ. ಇದಕ್ಕಾಗಿ ಒಂದು ಸಮನ್ವಯ ಸಮಿತಿಯನ್ನು ಸರ್ಕಾರ ರಚಿಸಬೇಕೆಂದು ಆಗ್ರಹಿಸಿದ್ದಾರೆ. ಕೊರೋನಾ ಮತ್ತು ಲಾಕ್ಡೌನ್ ವಿವಿಧ ಕ್ಷೇತ್ರಗಳ ಮೇಲೆ ಉಂಟುಮಾಡಿರುವ ಹಾನಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಘಳಿಗೆಯಲ್ಲಿ ಸದಾಶಿವ ಶೆಣೈ ಅವರ ಮಾತುಗಳು ಭರವಸೆಯ ಬೆಳ್ಳಿಗೆರೆಯೊಂದನ್ನು ಮೂಡಿಸಿದೆ.
ಇಷ್ಟಕ್ಕೂ ಕೊರೋನಾ ಇವತ್ತು ಅಥವಾ ನಾಳೆ ತೊಲಗುತ್ತದೆ ಎಂದು ಭಾವಿಸುವಂತೆಯೂ ಇಲ್ಲ. ಹಾಗೆಯೇ ಕೊರೋನಾ ಯಾವುದೇ ಮುನ್ಸೂಚನೆ ಇಲ್ಲದೆ ದುತ್ತನೆ ಬಂದೆರೆಗಿದ ಒಂದು ಬಯೋ ಬಾಂಬ್. ಇದರಿಂದ ನಾನಾ ಕ್ಷೇತ್ರಗಳು ತೀವ್ರಸ್ವರೂಪದ ಬಿಕ್ಕಟ್ಟಿಗೆ ಒಳಗಾಗಿದೆ. ಹಲವು ಕ್ಷೇತ್ರಗಳು ನಾಶವಾಗಿಯೇ ಹೋಗಿವೆ. ಅಂತಹವುಗಳಲ್ಲಿ ಮಾಧ್ಯಮ ಕ್ಷೇತ್ರವೂ ಒಂದಾಗಿದೆ.
ಕೊರೋನಾ ಸೋಂಕು ವೈದ್ಯರು, ದಾದಿಯರು, ಪೊಲೀಸರು, ಪೌರಕಾರ್ಮಿಕರನ್ನು ಮಾತ್ರ ಬಲಿಪಡೆಯದೆ ಪತ್ರಕರ್ತರನ್ನು ಮತ್ತು ಪತ್ರಿಕಾ ವಿತರಕರನ್ನು ನೂರಾರು ಸಂಖ್ಯೆಯಲ್ಲಿ ಬಲಿಪಡೆದಿದೆ. ಕೊರೋನಾ ಸೋಂಕಿನ ಹೊಡೆತಕ್ಕೆ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ, ವಾರ, ಮಾಸ ಪತ್ರಿಕೆಯ ಸಂಪಾದಕ, ಪತ್ರಿಕಾ ವಿತರಕ ಎಂಬ ಭೇದ ಭಾವ ಇಲ್ಲದೆ ಎಲ್ಲರನ್ನೂ ನುಂಗಿ ನೊಣೆದಿದೆ. ಕೆಲವರು ಸೋಂಕಿನೊಂದಿಗೆ ಸೆಣಸಾಡಿ ಗೆದ್ದು ಬಂದವರು ಇದ್ದಾರೆ. ಪತ್ರಿಕೆಗಳಂತೂ ಸೋಂಕಿನ ದಾಳಿಯಿಂದಾಗಿ ಆನ್ಲೈನ್ ಆವೃತ್ತಿಗೆ ಗಂಟುಬಿದ್ದಿವೆ. ಇಂತಹ ದಿಢೀರ್ ಬೆಳವಣಿಗೆಯಿಂದ ಪತ್ರಿಕೆಗಳ ಮೂಲಸ್ವರೂಪ ನಾಶವಾಗುತ್ತ ಸಾಗುತ್ತಿದೆ. ಇದರಿಂದ ಪತ್ರಕರ್ತರ ಬದುಕು ಹೈರಾಣಾಗಿದೆ. ಅಲ್ಲದೆ ಕೊರೋನಾ ಸೋಂಕು ದೇಶಾದ್ಯಂತ 100ಕ್ಕೂ ಹೆಚ್ಚು ಪತ್ರಕರ್ತರನ್ನು 130ಕ್ಕೂ ಹೆಚ್ಚು ಪತ್ರಿಕಾ ವಿತರಕರನ್ನು ಬಲಿಪಡೆದಿದೆ. ಬಹುಶಃ ಇದು ಜಗತ್ತಿನಲ್ಲಿಯೇ ಅಧಿಕ ಇರಬೇಕು. ಜಗತ್ತಿನಾದ್ಯಂತ ಸುಮಾರು 450ಕ್ಕೂ ಹೆಚ್ಚು ಪತ್ರಕರ್ತರು ಮರಣಿಸಿರುವ ಅಂದಾಜಿದೆ. ವಿಷಾದ ಎಂದರೆ, ಸೋಂಕಿಗೆ ಗುರಿಯಾಗಿ ಬಲಿಯಾದ ಪತ್ರಕರ್ತರ ವಿವರವನ್ನು ಸರ್ಕಾರದ ಯಾವೊಂದು ಇಲಾಖೆಯು ದಾಖಲಿಸಿಟ್ಟುಕೊಂಡಿರುವುದಿಲ್ಲ. ಕನಿಷ್ಠಪಕ್ಷ ಜೀವ ಬಿಟ್ಟಿರುವ ಹಲವು ಪತ್ರಕರ್ತರ ನಿಧನ ಸುದ್ದಿಯಾಗಿರುವುದೇ ಇಲ್ಲ. ಪತ್ರಿಕಾ ವಿತರಕರ ಜೀವ ಮತ್ತು ವಿವರ ಕೂಡ ಲಭ್ಯವಾಗಿರುವುದು ದೂರದ ಮಾತೇ ಸರಿ.
ಕಳೆದ 8 ತಿಂಗಳುಗಳಿಂದ ಕಾಡುತ್ತಿರುವ ದೀರ್ಘಕಾಲದ ಕೊರೋನಾ ಪಿಡುಗು ಮುದ್ರಣ ಮಾಧ್ಯಮಕ್ಕೆ `ಚರಮಗೀತೆ’ ಹಾಡಿದೆ. ಪತ್ರಿಕೆಗಳ ಕಾಲ ಮುಗಿಯಿತು. ಬಾಗಿಲು ಮುಚ್ಚಿ ಕೂರಬೇಕು. ಮುದ್ರಣ ಮಾಧ್ಯಮದ ಪತ್ರಕರ್ತರು ನಿರುದ್ಯೋಗಿಗಳಾಗುತ್ತಾರೆ ಎಂಬ ಮಾತುಗಳು ನಿರಾಶವಾದಿಗಳಿಂದ ಕೇಳಿಬರುತ್ತಲೇ ಇದೆ. ಆದರೆ, ನಾನು ಮಾತ್ರ ಆಶಾವಾದ ಹೊಂದಿರುವೆ. ನಿರಾಶೆಯ ಚಾದರವನ್ನು ಹೊದ್ದಿರುವುದಿಲ್ಲ. ಪತ್ರಿಕೆಗಳು ಕಣ್ಮರೆಯಾಗುತ್ತವೆ ಎಂಬ ಭಾವನೆ ತಾತ್ಕಾಲಿಕ. ಇವತ್ತು ಉತ್ಕರ್ಷದಲ್ಲಿರುವ ಆನ್ಲೈನ್ ಆವೃತ್ತಿಗಳನ್ನು ಕಂಡು ಇಂತಹದ್ದೊಂದು ಪುರಾಣ ಹೇಳಲು ಮುಂದಾಗುವುದು ನಿಜಕ್ಕೂ ನಿಜವಲ್ಲ. ಆನ್ಲೈನ್ ಆವೃತ್ತಿ ಎಂದಿಗೂ ಮುದ್ರಣ ಮಾಧ್ಯಮಕ್ಕೆ ಮಾರಣಾಂತಿಕ ಪೆಟ್ಟು ನೀಡಲು ಸಾಧ್ಯವೇ ಇಲ್ಲ. ಆದರೂ, ದಶಕಗಳ ಕಾಲ ಓದುಗರನ್ನು ಹಿಡಿದಿಟ್ಟಿದ್ದ `ಹಾಯ್ ಬೆಂಗಳೂರು’ ನಂತಹ ಪತ್ರಿಕೆ ಲಾಕ್ಡೌನ್ ಸಂದರ್ಭದಲ್ಲಿ ಪ್ರಕಟಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ಕಳವಳವನ್ನಂತೂ ಮೂಡಿಸಿತ್ತು. ಇಂದಿನ ಇಂಟರ್ನೆಟ್ ಯುಗದಲ್ಲಿ `ಓದುವಿಕೆ ಸಾಯುವ ಕಲೆ’ ಎನ್ನುವ ಹೊತ್ತಿನಲ್ಲಿ ಇಂತಹ ಬೆಳವಣಿಗೆಗಳು ನಿರಾಶೆಯನ್ನುಂಟುಮಾಡಿತ್ತು.
ನನ್ನಲೇಕೆ `ಆಶಾವಾದ’ ಪ್ರಬಲವಾಗಿದೆಯೆಂದರೆ, ಅನಾದಿಕಾಲದಿಂದ, ಇಂದಿನವರೆಗೂ ನಾವುಗಳು ಹೊಸ ಚಿಂತನೆಗಳಿಗೆ, ಹೊಸತನಕ್ಕೆ ಅಷ್ಟು ಸುಲಭವಾಗಿ ಒಗ್ಗಿಕೊಂಡಿರುವುದಿಲ್ಲ. ಹೀಗಾಗಿ `ಆನ್ಲೈನ್ ಶಿಕ್ಷಣ’ದಂತೆಯೇ, `ಆನ್ಲೈನ್ ಆವೃತ್ತಿ’ ಕೂಡ ಆವಿಯಾಗಿ ಹೋಗಿಬಿಡಲಿದೆ. ವೆಬಿನಾರ್ಗಳು, ವೆಬ್ಬಿಗರ ಸಂಖ್ಯೆ ಇವತ್ತಿಗೂ ಅತಿವಿರಳ. `ಆನ್ಲೈನ್ ಶಿಕ್ಷಣ’ದಂತೆ `ಆನ್ಲೈನ್ ಆವೃತ್ತಿ’ ಕೂಡ ಸೋಂಕು ಇಳಿಕೆಯಾಗುತ್ತಿದ್ದಂತೆ ಕಣ್ಮರೆಯಾಗುತ್ತದೆ. ಅನಿವಾರ್ಯ ಸ್ಥಿತಿಯಲ್ಲಿ ಇವು ಅಸ್ತಿತ್ವದಲ್ಲಿದೆ. ಆದರೆ ಇದೆಂದಿಗೂ ಒಂಟಿಯಾಗಿ ಸಾಗಲಾರದು. `ಸಂಪ್ರದಾಯಿಕ ಶಿಕ್ಷಣ ಪದ್ಧತಿ’, `ಸಾಂಪ್ರದಾಯಿಕ ಮಾಧ್ಯಮ’ಗಳ ಜೊತೆಗೆ `ಆನ್ಲೈನ್ ಶಿಕ್ಷಣ’, `ಆನ್ಲೈನ್ ಆವೃತ್ತಿ’ ಹೆಜ್ಜೆ ಹಾಕಬೇಕಿದೆ.
ಹಿರಿಯ ಪತ್ರಕರ್ತ ಐ.ಎಚ್. ಸಂಗಮದೇವ ಅವರು `ಹಾಯ್ ಬೆಂಗಳೂರು’ ಪತ್ರಿಕೆಯ ವರದಿಗಾರರಾಗಿದ್ದ ಕಾಲದಿಂದಲೂ ನಾನದರ ಓದುಗನಾಗಿದ್ದೆ. ಸಮಾಜದೊಳಗಿನ ಅಕ್ರಮ, ಅನ್ಯಾಯಗಳನ್ನು ಐ.ಎಚ್. ಸಂಗಮದೇವ ಅವರು ಅನಾರಣಗೊಳಿಸುತ್ತಿದ್ದ ಪರಿ ಕಂಡು ಬೆರಗಾಗಿದ್ದೆ. ವಿಠಲಮೂರ್ತಿ ಅವರ ರಾಜಕೀಯ ವರದಿಗಳನ್ನು ತಪ್ಪದೆ ಓದುತ್ತಿದ್ದೆ. ರಾ. ಸೋಮನಾಥ್, ಎಂ.ಎಸ್. ಸತೀಷ್ ಅವರ ಲೇಖನಗಳು ಕುತೂಹಲವನ್ನು ಹುಟ್ಟಿಸುತ್ತಿತ್ತು. ಇಂತಹ ಪತ್ರಿಕೆ ಪ್ರಕಟಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು ನಿಜಕ್ಕೂ ತುಂಬಲಾಗದ ನಷ್ಟವೇ ಆಗಿತ್ತು. ಮೋದಿಯವರು ಕನಿಷ್ಠ ಅಂದು ನಮ್ಮೊಂದಿಗಿದ್ದ ಪತ್ರಿಕಾ ಸಂಪಾದಕರ ಮತ್ತು ಓದುಗರ ಗಮನಕ್ಕೆ ಸುಳಿವನ್ನು ನೀಡಿಯಾದರೂ ಲಾಕ್ಡೌನ್ ಹೇರಿದ್ದರೆ `ಹಾಯ್ ಬೆಂಗಳೂರು’ ತನ್ನ ಪ್ರಕಟಣೆಯನ್ನು ನಿಲ್ಲಿಸುತ್ತಿರಲಿಲ್ಲ ಅನಿಸುತ್ತದೆ.
`ಹಾಯ್ ಬೆಂಗಳೂರು’ ಪತ್ರಿಕೆಯನ್ನು `ಅನಿರ್ಭಂದಿತ ಕಾಲ’ ನಿಲ್ಲಿಸಲಾಗಿತ್ತು. ಇದಕ್ಕೆ ಕೊರೋನಾ ಸೋಂಕು ಲಾಕ್ಡೌನ್ ಕಾರಣವಾಗಿತ್ತಾದರೂ, ಮತ್ತೆ ಪ್ರಕಟಣೆಯನ್ನು ಕಂಡಿತ್ತು ವಿಧಿಲಿಖಿತ ಪತ್ರಿಕೆ ಸಂಪದಕ ರವಿ ಬೆಳಗೆರೆ ಅವರು ಹೃದಯಾಘಾತಕ್ಕೆ ಒಳಗಾಗಿ ನಮ್ಮನ್ನಗಲಿದ್ದಾರೆ. ಇದು ಕೂಡ ಭರಿಸಲಾಗದ ನಷ್ಟವಾಗಿದೆ. ಇದು 1995ರಲ್ಲಿ ರವಿ ಬೆಳಗೆರೆಯವರ ಸಂಪಾದಕತ್ವದಲ್ಲಿ ಆರಂಭವಾಗಿ, ಉದಯೋನ್ಮುಖ ಪತ್ರಕರ್ತರನ್ನು ಕೊಡುಗೆಯಾಗಿ ಕೊಟ್ಟಿದೆ. ಇಷ್ಟಕ್ಕೆ ಕೆಲವರು ಮುದ್ರಣ ಮಾಧ್ಯಮ ದಿನಕಳೆದಂತೆ ಸ್ಥಗಿತಗೊಳ್ಳುತ್ತದೆ ಎಂದು ಸಂತಾಪ ಸೂಚಿಸಿ, ಗೋರಿ ಬರಹಗಳನ್ನು ಬರೆಯಲು ಮುಂದಾಗಿದ್ದಾರೆ. `ಹಾಯ್ ಬೆಂಗಳೂರು’ನಂತಹ ಪತ್ರಿಕೆ ಕೆಲತಿಂಗಳುಗಳ ಕಾಲ ನಿಂತಿರಬಹುದು. ಅದರ ಸಂಪಾದಕರು ಇಂದು ನಮ್ಮೊಂದಿಗೆ ಇಲ್ಲದಿರಬಹುದು. ಹಾಗೆಯೇ ಪ್ರಜಾವಾಣಿ, ಕನ್ನಡಪ್ರಭ, ವಿಜಯ ಕರ್ನಾಟಕ, ವಿಜಯವಾಣಿ, ಸಂಯುಕ್ತ ಕರ್ನಾಟಕ, ಸಂಜೆವಾಣಿ, ಇಂದು ಸಂಜೆ, ಈ ಸಂಜೆ ತನ್ನ ಪುಟಗಳ ಸಂಖ್ಯೆಯನ್ನು ಹೆಚ್ಚಿಸಿಲ್ಲದಿರಬಹುದು. ಪುರವಣಿಗಳನ್ನು ನಿಲ್ಲಿಸಿಯೂ ಇರಬಹುದು. ಹಲವೆಡೆ ಮುದ್ರಣರೂಪದಲ್ಲಿ ಸಿಗದೆಯೂ ಇರಬಹುದು. ಹೀಗಾಗಿ ಕೆಲವರು ಆನ್ಲೈನ್ ಆವೃತ್ತಿಯ ಮೊರೆ ಹೋಗಿರಬಹುದು. ಇಂತಹ ದುಸ್ತರ ಕಾಲ ತಾತ್ಕಾಲಿಕ. ಇದನ್ನೆ ವಿದಾಯ ಎಂದು ಭಾವಿಸಬಾರದು. ಇದನ್ನರಿಯದೆ ಕೆಲವರು ಪತ್ರಿಕೆಗಳಿಗೆ ಚಿರಶಾಂತಿಯನ್ನು ಕೋರಲು ಹೊರಟಿದ್ದಾರೆ. ಇದನ್ನು `ದಿ ಅಡಿಕ್ಷನ್ ಸಿಂಡ್ರೋಮ್’ ಎಂದೇ ಭಾವಿಸಿರುವೆ.
ಆದರೆ ವಿಷಾದದ ಸಂಗತಿಯೆಂದರೆ, ನೂರಾರು ಪತ್ರಕರ್ತರು ಕೊರೋನಾ ಅಂಟಿಸಿಕೊಂಡು ಅಸುನೀಗಿದ್ದಾರೆ. ಹಲವರು ಕೊರೋನಾ ಸೋಂಕು ಅಂಟಿಸಿಕೊಳ್ಳದಿದ್ದರೂ, ಕೊರೋನಾ ಲೆಕ್ಕದಲ್ಲಿ ಹತರಾಗಿದ್ದಾರೆ. ಹತರಾದ ಪತ್ರಕರ್ತರ ಉಸಿರಿಗೂ ಸರ್ಕಾರ ಸೂಕ್ತ ಗೌರವ ಕೊಟ್ಟಿರುವುದಿಲ್ಲ. ಪತ್ರಕರ್ತರನ್ನು `ಕೊರೋನಾ ವಾರಿಯರ್ಸ್’ ಎಂದು ಘೋಷಿಸಬೇಕು. ವೈದ್ಯರಿಗೂ, ದಾದಿಯರಿಗೂ, ಪೌರಕಾರ್ಮಿಕರಿಗೂ ಸಿಗುವ ಎಲ್ಲ ಸವಲತ್ತುಗಳನ್ನು ಒದಗಿಸಿಕೊಡಬೇಕೆಂಬ ಬೆಂಗಳೂರು ಪ್ರೆಸ್ಕ್ಲಬ್, ಕೆ.ಯು. ಡಬ್ಲ್ಯೂ.ಜೆ. ಕೆರಾ, ಕೆ.ಜೆ.ಯು ಸರ್ಕಾರದ ಮುಂದೆ ಮಾಡಿಕೊಂಡ ಮನವಿಯನ್ನು ಇದುವರೆಗೂ ಪರಿಗಣಿಸಿಯೇ ಇರುವುದಿಲ್ಲ. ಕೊರೋನಾ ಸೋಂಕು ಅಂಟಿಸಿಕೊಂಡು ವೈದ್ಯ, ದಾದಿ, ಪೌರಕಾರ್ಮಿಕ ಜೀವಬಿಟ್ಟರೆ ಕೊಡಮಾಡುವ ಪರಿಹಾರದಲ್ಲಿ ಕನಿಷ್ಠ ಅರ್ಧದಷ್ಟನ್ನು ಪ್ರಾಣಬಿಟ್ಟ ಪತ್ರಕರ್ತರ ಕುಟುಂಬಕ್ಕೆ ಕೊಟ್ಟಿರುವುದಿಲ್ಲ. ಒಬ್ಬ ಪತ್ರಕರ್ತನ ಜೀವದ ಬೆಲೆ ಐದೇ ಲಕ್ಷನಾ? ಎಂದು ಕೂಗಿ, ಕೂಗಿ ಕೇಳಬೇಕೆನಿಸುತ್ತದೆ.
ಇದನ್ನೇಕೆ ಹೇಳಬೇಕಾಯಿತೆಂದರೆ, ಸರ್, ನನಗೆ ಕೋವಿಡ್ ಇಲ್ಲ. ಮೊದಲಿನಿಂದಲೂ ಗ್ಯಾಸ್ಟಿಕ್ ಸಮಸ್ಯೆ ಇದೆ. ಅದಕ್ಕೆ ಚಿಕಿತ್ಸೆ ಕೊಡಿ. ನಮ್ಮಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮೊದಲಿಗೆ ನೆಗೆಟಿವ್ ಬಂದಿತ್ತು. ನಂತರ ವೈದ್ಯರು ತಿದ್ದಿಕೊಟ್ಟಿದ್ದಾರೆ. ಬೇಕಿದ್ದರೆ ಇಲ್ಲಿಯೂ ನನ್ನ ಸ್ವ್ಯಾಬ್ ತೆಗೆದು ಪರೀಕ್ಷೆಗೆ ಒಳಪಡಿಸಿ. ಇಲ್ಲಿ ಸೋಂಕಿನಿಂದ ಗುಣಮುಖರಾಗದೆ ಪ್ರಾಣಬಿಡುವವರನ್ನು ಕಂಡರೆ ಭಯವಾಗುತ್ತಿದೆ. ಬೇರೆ ಆಸ್ಪತ್ರೆಗಾದರೂ ಕಳುಹಿಸಿಬಿಡಿ ಎಂದು ಕಾಡಿ ಬೇಡಿದರೂ, ಜೀವ ತೆಗೆಯಲಾಗಿದೆ ಎಂದು ಮೃತ ಪತ್ರಕರ್ತನ ಪತ್ನಿ ಅವಲತ್ತುಕೊಂಡಿದ್ದಾರೆ. ಇದು ದೂರದ ಉತ್ತರ ಪ್ರದೇಶ ಅಥವಾ ಅಸ್ಸಾಂನಲ್ಲಿ ನಡೆದಿರುವ ದುರ್ಘಟನೆಯಲ್ಲ. ತುಮಕೂರಿನ ಜಿಲ್ಲಾ ಆಸ್ಪತ್ರೆಯಲ್ಲಿ ಜೀವಬಿಟ್ಟ ನತದೃಷ್ಟ ಪತ್ರಕರ್ತನ ವ್ಯಥೆಯ ಕಥೆ. ಇಷ್ಟಕ್ಕೂ ಈ ನತದೃಷ್ಟ ಸಣ್ಣ ಪತ್ರಿಕೆಯೊಂದರ ಸುದ್ದಿಸಂಗ್ರಹಕಾರನಲ್ಲ. ನಾಡಿನ ಪ್ರತಿಷ್ಠಿತ ಪ್ರಜಾವಾಣಿ ಪತ್ರಿಕೆಯ ಅರೆಕಾಲಿಕ ವರದಿಗಾರ. ಸಮಾಜದ ಅಂಕು–ಡೊಂಕನ್ನು ತಿದ್ದಿ–ತೀಡುವ ಪತ್ರಕರ್ತ ಜಯಣ್ಣನ ಸ್ಥಿತಿಯೇ ಹೀಗೆ ಆದರೆ, ಉಳಿದವರ ಪಾಡು ಹೇಗಾಗಿರಬಾರದು. ಜಯಣ್ಣ ಜಿಲ್ಲಾ ಆಸ್ಪತ್ರೆಗೆ ಸೇರಿದ ನಂತರ ಆರ್.ಟಿ.ಪಿ.ಸಿ.ಆರ್. ವರದಿಯ ಫಲಿತಾಂಶ ಬಂದಿದೆ. ನನ್ನ ಪತಿಗೆ ಕೊರೋನಾ ಇಲ್ಲ. ಗ್ಯಾಸ್ಟಿçಕ್ ಸಮಸ್ಯೆ ಇದೆ. ಅದಕ್ಕೆ ಚಿಕಿತ್ಸೆ ಕೊಡಿ ಎಂದು ಜಯಣ್ಣನ ಪತ್ನಿ ಕೂಡ ವೈದ್ಯರಲ್ಲಿ ಭಿನ್ನವಿಸಿಕೊಂಡಿದ್ದಾರೆ. ಅದು ಉಪಯೋಗಕ್ಕೆ ಬಂದಿರುವುದಿಲ್ಲ. ಜಯಣ್ಣನ ಜೀವ ಹಾರಿಹೋಗಿದೆ. ಹಾಗಾದರೆ ಜಯಣ್ಣನ ಉಸಿರನ್ನು ನಿಲ್ಲಿಸಿದ್ದು ಕೊರೋನಾನ? ಜಯಣ್ಣನ 1 ವರ್ಷದ 6 ತಿಂಗಳ ಮಗುವಿನ ಲಾಲನೆ–ಪಾಲನೆ ಹೊಣೆ ಹೊರುವವರು ಯಾರು? ಅವರ ಕುಟುಂಬವರ್ಗಕ್ಕೆ ಆಸರೆ ಯಾರು? ಇವರು ಕೊರೋನಾ ವಾರಿಯರ್ ಅಲ್ಲವೇ? ಇವರ ಜೀವದ ಬೆಲೆ ಐದೇ ಲಕ್ಷವೇ?
“ನಮ್ಮಪ್ಪನಿಗೆ ಕೊರೋನಾ ಅಂಟಿಲ್ಲವೆಂದು ಸಂಜೀವಿನಿ ಆಸ್ಪತ್ರೆಯಲ್ಲಿ ಪರೀಕ್ಷಿಸಿ ಹೇಳಿದ್ದರು. ಜೊತೆಗೆ ಸ್ವಲ್ಪ ಮಟ್ಟಿಗೆ ಅದೇ ಬಗೆಯ ಲಕ್ಷಣಗಳು ಕಾಣಿಸುತ್ತಿವೆಯೆಂದು ಮದ್ದು–ಮಾತ್ರೆ ಕೊಟ್ಟು ಮನೆಗೆ ಕಳುಹಿಸಿದ್ದರು. ನಂತರ ಉಸಿರಾಟದ ಸಮಸ್ಯೆ ಉಲ್ಭಣವಾಯಿತು. ಗುಲ್ಬರ್ಗಾದ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದೆವು. ಮಾರ್ಗದ ಮಧ್ಯೆ ಅವರ ಉಸಿರು ನಿಂತುಹೋಯಿತು. ನಾವು ನಾಲ್ಕು ಮಂದಿ ಮಕ್ಕಳು ಅನಾಥರಾಗಿದ್ದೇವೆ. ಸರ್ಕಾರದಿಂದ ನಯಾಪೈಸೆ ಪರಿಹಾರವೂ ಬಂದಿಲ್ಲ. ಬದುಕಿನುದ್ದಕ್ಕೂ ನಮ್ಮಪ್ಪ ಪತ್ರಿಕೆಗಾಗಿ ದುಡಿದು, ದುಡಿದು ಜೀವ ಬಿಡುವಂತಾಯ್ತು. ಇದೀಗ ನಮ್ಮ ಬದುಕನ್ನು ಕಟ್ಟಿಕೊಡುವರು ಯಾರು’’ ಎಂದು ಯಾದಗಿರಿ ಜಿಲ್ಲೆಯ, ಕಕ್ಕೆರಾದ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ವೆಂಕಟೇಶ್ ದೊರೆ ಅವರ ಪುತ್ರ ಶ್ರೀಹರಿ ಪಶ್ನಿಸಿದ್ದಾರೆ.
“ನಮ್ಮಣ್ಣನಿಗೆ ಕೊರೋನಾ ಸೋಂಕು ಬಂದಾಗ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದೆವು. ಗುಣವಾದ ನಂತರ ಮನೆಗೆ ಕರೆತಂದೆವು. ದಿಢೀರೆಂದು ಉಸಿರಾಟದ ಸಮಸ್ಯೆ ಉದ್ಭವವಾಗಿ ಅವರ ಜೀವವನ್ನು ಕೊರೋನಾ ತೆಗೆದಿದೆ. ಇಬ್ಬರು ಹೆಣ್ಣುಮಕ್ಕಳ ವಿವಾಹ ಮಾಡಬೇಕಿತ್ತು. ಅಣ್ಣನಿಲ್ಲದೆ ದಾರಿಕಾಣದಂತಾಗಿದೆ. ಸರ್ಕಾರ ಕೂಡ ಇನ್ನೂ ಪರಿಹಾರ ಕೊಟ್ಟಿಲ್ಲವೆಂದು’’ ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕಿನ, ಉದಯಕಾಲ ದಿನಪತ್ರಿಕೆಯ ವರದಿಗಾರ ಸೋಮಶೇಖರ್ ನರಬೋಳಿ ಅವರ ತಮ್ಮ ರವಿಕುಮಾರ್ ನರಬೋಳಿ ಅವರು ನೋವಿನಿಂದ ನುಡಿದಿದ್ದಾರೆ.










