ಸಿಡ್ನಿ : ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ನಡುವೆ ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಪಡೆ 66 ರನ್ ಗಳಿಂದ ಜಯಗಳಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್ ಗಳಲ್ಲಿ 374 ರನ್ ಸಿಡಿಸಿ ಭಾರತಕ್ಕೆ ಬೃಹತ್ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 22 ರನ್ ಗಳಿಸಿ ಔಟಾದರು. ಬಳಿಕ ಬಂದ ನಾಯಕ ವಿರಾಟ್ ಕೊಹ್ಲಿ ಕೂಡಾ 21 ರನ್, ಶ್ರೇಯಸ್ ಅಯ್ಯರ್(2), ಕೆ.ಎಲ್ ರಾಹುಲ್(12) ರನ್ ಗಳಿಸಲಷ್ಟೇ ಶಕ್ತರಾದರು. 13 ಓವರ್ಗಳಲ್ಲಿ ಭಾರತ ತಂಡ ತನ್ನ 4 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಬ್ಯಾಟಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯ ಹಾಗೂ ಧವನ್ 128 ರನ್ಗಳ ಉತ್ತಮ ಜೊತೆಯಾಟ ನೀಡಿದರು. ಬಳಿಕ 74 ರನ್ ಗಳಿಸಿ ಶಿಖರ್ ಧವನ್ ಜಂಪಾಗೆ ವಿಕೆಟ್ ಒಪ್ಪಿಸಿದರು. ಉತ್ತಮವಾಗಿ ಆಟವಾಡುತ್ತಿದ್ದ ಹಾರ್ಧಿಕ್ ಪಾಂಡ್ಯ 76 ಎಸೆತಗಳಲ್ಲಿ 90 ರನ್ ಗಳಿಸಿ ಸ್ಟಾರ್ಕ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿಕೊಂಡರು. ಅಂತಿಮವಾಗಿ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 308 ರನ್ ಗಳಿಸಿತು.










