ಬಾಡಿಗೆ ತಾಯಂದಿರ ಬದುಕಿಗೆ ಕೊಳ್ಳಿಯಿಟ್ಟ ಕೊರೋನಾ…!

373
firstsuddi
  • ಡಾ. ಎಂ.ಎಸ್. ಮಣಿ

ಕೊರೋನಾ ಸೋಂಕು ಹಬ್ಬುತ್ತಿದ್ದಾಗ, ತಡೆದು ನಿಲ್ಲಿಸಲು ರೂಪಿಸಿದ ಯೋಜನೆ, ಕಾರ್ಯತಂತ್ರ, ಅನುಷ್ಠಾನಗೊಳಿಸಿದ ರೀತಿ, ಪುರುಷರಿಗಿಂತ ಮಹಿಳೆಯರೇ ಉತ್ತಮ ಎಂಬುದನ್ನು ಸಾಬೀತುಪಡಿಸಿದೆ. ಮಹಿಳೆಯರು ಮುಖ್ಯಸ್ಥರಾಗಿರುವ ರಾಜ್ಯ, ರಾಷ್ಟ್ರಗಳಲ್ಲಿ ಸೋಂಕು ಹರಡುವುದನ್ನು ನಿಯಂತ್ರಣ ಮಾಡಿ, ಅಸುನೀಗುವವರನ್ನು ರಕ್ಷಿಸಿಕೊಂಡಿದ್ದಾರೆ. ಹಾಗೆಯೇ ಅಭಿವೃದ್ಧಿ ಹೊಂದಿದ ದೇಶಗಳಿಗೆ ಔಷಧ ಸೇರಿದಂತೆ, ಇನ್ನಿತರ ನೆರವುಗಳನ್ನು ನೀಡಿದ್ದಾರೆ. ಇದರ ಬಗ್ಗೆ ಮಾಧ್ಯಮಗಳು ಬೆಳಕು ಚೆಲ್ಲಬೇಕಿತ್ತು.

ಕೊರೋನಾ ಸೋಂಕು ಹರಡುವ ಆರಂಭದಲ್ಲಿಯೇ, ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡು ತಡೆಗಟ್ಟಿದ ಕೀರ್ತಿ ದೇವರನಾಡು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರಿಗೆ ಸಲ್ಲುತ್ತದೆ. ಕೊರೋನಾ ಸೋಂಕು ವಿರುದ್ಧ ಮಂಚೂಣಿಯಲ್ಲಿ ನಿಂತು ಕೆಲಸ ಮಾಡಿದ ಕಾರಣಕ್ಕಾಗಿ ಗೌರವಿಸುವ ಸಲುವಾಗಿ ವಿಶ್ವಸಂಸ್ಥೆಯ ಸಾರ್ವಜನಿಕ ಸೇವಾ ದಿನಾಚರಣೆ ವರ್ಚುವಲ್ ಸಮಾವೇಶದಲ್ಲಿ ಪ್ರಮುಖ ಪ್ಯಾನೆಲ್ ಭಾಷಣಕಾರರನ್ನಾಗಿ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಆಹ್ವಾನಗೊಂಡ ಏಕೈಕ ಭಾರತೀಯರು ಇವರಾಗಿದ್ದಾರೆ.

ಜರ್ಮನಿಯ ಚಾನ್ಸೆಲರ್ ಆ್ಯಂಜೆಲಾ ಮಾರ್ಕೆಲ್ ಕೊರೋನಾ ತಪಾಸಣೆ ಮತ್ತು ವೈರಾಣುವಿನ ಹೆಜ್ಜೆಗಳನ್ನು ಗುರ್ತಿಸಲು ಪ್ರಯತ್ನಿಸಿದ್ದರು. ಇದೇ ವಿಧಾನವನ್ನು ಜಗತ್ತಿನ ಎಲ್ಲಾ ದೇಶಗಳು ಅನುಸರಿಸಿವೆ. ಆ್ಯಂಜೆಲ್ ಮಾರ್ಕೆಲ್ ಸೋಂಕಿನ ವಿರುದ್ಧ ನಡೆಸಿದ ಅವಿರತ ಶ್ರಮದಿಂದ ಹಲವು ಜೀವ ಮತ್ತು ಜೀವನೋಪಾಯ ಉಳಿದಿದೆ. ಕೊರೋನಾ ಅತ್ಯಂತ ಕ್ರೂರವಾಗಿ ಹಬ್ಬುವಾಗ ವಿಶ್ವದೆಲ್ಲೆಡೆ ಕೊರೋನಾ ತಪಾಸಣೆ ನಡೆಸಲು ಪರದಾಡುತ್ತಿದ್ದರು. ಹಲವೆಡೆ ಲಕ್ಷಗಟ್ಟಲೆ ನಷ್ಟ ಹೊಂದಿ ಕೋಟ್ಯಾಂತರ ಜನ ಉದ್ಯೋಗ ಕಳೆದುಕೊಂಡಿದ್ದರು. ಗ್ರೇಟ್ ಬ್ರಿಟನ್ ಕೂಡ ಸಹಸ್ರಾರು ಲೆಕ್ಕದಲ್ಲಿ ಸಾವನ್ನು ಕಂಡಿತ್ತು.

ನ್ಯೂಜಿಲೆಂಡ್‍ನಲ್ಲಿ ಕೂಡ ಜೆಸಿಂಡಾ ಆರ್ಡನ್ ಕೊರೋನಾ ಸೋಂಕಿನಿಂದ ತನ್ನ ಜನರನ್ನು ರಕ್ಷಿಸಿದ್ದಾರೆ. ಜೊತೆಗೆ ತಮ್ಮ ಕಾರ್ಯತಂತ್ರಗಳನ್ನು ಉಳಿಕೆ ದೇಶಗಳೊಂದಿಗೆ ಹಂಚಿಕೊಂಡಿದ್ದಾರೆ. ಭಯೋತ್ಪಾದನೆ ಹೆಚ್ಚಿದಾಗ ಸಹಿಷ್ಣುತೆಯನ್ನು, ಸ್ಥಿತಿಸ್ಥಾಪಕತ್ವವನ್ನು ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ನೋವುಂಡ ಸಮುದಾಯಕ್ಕೆ ಸುರಕ್ಷತೆಯನ್ನು ಒದಗಿಸಿ, ಧೈರ್ಯ ತುಂಬಿದ್ದಾರೆ.

ಹೀಗೆ ನಾಯಕತ್ವದ ಗುಣವನ್ನು ಹೊಂದಿದ್ದರೂ, ಮಾನವ ಕುಲದ ಆರಂಭದಿಂದಲೂ `ಮಹಿಳೆ’ ಶೋಷಣೆಯ ಸಾಧನವಾಗಿದ್ದಾಳೆ. ಶೋಷಣೆಯ ಹಲವಾರು ಕ್ರೂರ ದುರಂತಗಳನ್ನು ದಾಟಿಯೂ ಬರುತ್ತಿದ್ದಾಳೆ. ಆದರೆ, ಇದೀಗ ಎರಗಿ ಬಂದಿರುವ ಕೊರೋನಾ ಸೋಂಕಿನಿಂದಾಗಿ ಮಧ್ಯಮ ಮತ್ತು ಬಡವರ್ಗದ ಮಹಿಳೆಯರು ತಮ್ಮ ಮನೆ, ಕುಟುಂಬ ಮತ್ತು ಸಂಬಂಧದ ಸರ್ವವನ್ನೂ ಕಳೆದುಕೊಳ್ಳುವ ಅಂಚಿನಲ್ಲಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕವಿತಾ ಶ್ರೀನಾಥ್ ಹೇಳುವಂತೆ, ದೂರದಿಂದ ಕಂಡಾಗ ಹುಲ್ಲು ಹಚ್ಚಹಸಿರಿನಿಂದ ನಳನಳಿಸುತ್ತಾ ಕಾಣುತ್ತದೆ. ಅದೇ ಹುಲ್ಲಿನ ಮೇಲೆ ಕೂತಾಗ ಮಾತ್ರ ಅದರ ಕೊಳಕು ಬದಿಯನ್ನು ಕಾಣಲು ಸಾಧ್ಯವಾಗುತ್ತದೆ.

ಹೌದು ಇದನ್ನೇಕೆ ಹೇಳಬೇಕಾಯಿತೆಂದರೆ, ನನ್ನ ಮನೆಯಿಂದ ಅರ್ಧ ಮೈಲಿ ದೂರದಲ್ಲಿ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಇದೆ. ಇದನ್ನು ಏಷ್ಯಾದಲ್ಲಿಯೇ ಅತಿದೊಡ್ಡ ರೈಲ್ವೆ ನಿಲ್ದಾಣ ಮಾಡುವುದಾಗಿ ಘೋಷಿಸಿದ್ದ ಅಂದಿನ ರೈಲ್ವೆ ಮಂತ್ರಿ ಕೆ.ಎಚ್. ಮುನಿಯಪ್ಪ ಇವತ್ತು ಯಾವುದೇ ಸದನದ ಸದಸ್ಯರು ಅಲ್ಲ. ಹಾಗೆಯೇ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣ ಕೂಡ ಏಷ್ಯಾ ಅಲ್ಲ, ಬೆಂಗಳೂರಿನಲ್ಲಿಯೇ ಉತ್ತಮ ನಾಗರೀಕ ಸೌಲಭ್ಯ ಹೊಂದಿರುವ ನಿಲ್ದಾಣದಂತೆಯೂ ಬದಲಾಗಿಲ್ಲ. ಇರಲಿ, ಕಳೆದ ವಾರ ಇಲ್ಲಿ ಸಾಗುತ್ತಿರುವಾಗ ಜೋಲಾರಪೇಟೆ ಕಡೆ ಸಾಗುವ ರೈಲು ಬರುವ ಸಮಯವಾಗಿತ್ತು. ಅಲ್ಲಲ್ಲಿ ಜನ ಗುಂಪು, ಗುಂಪಾಗಿ ಕುಳಿತು ಚರ್ಚಿಸುತ್ತಿದ್ದರು. ಅವರೆಲ್ಲರ ಚರ್ಚೆಯೂ ಕೊರೋನಾ ಪೀಡನೆ ಕುರಿತಂತೆಯೇ ಇತ್ತು.

ಒಂದು ಗುಂಪಿನಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬಳನ್ನು ಏನು ಕೆಲಸ ಮಾಡುವೆ ಎಂದು ತಮಿಳಿನಲ್ಲಿ ವಿಚಾರಿಸುತ್ತಲೇ ಇದ್ದರು. ಆಕೆ ಅದೇಕೋ ಮುಜುಗರಕ್ಕೆ ಒಳಗಾದಂತೆ ಕಂಡುಬಂದಳು. ತಲೆತಗ್ಗಿಸಿ ತನಗೆ ಕೇಳಿಸಿಲ್ಲದಂತೆ ಮೌನವಾಗಿದ್ದಳು. ಆದರೆ, ಪಕ್ಕದಲ್ಲಿದ್ದ ಹೆಂಗಸೊಂದು ಬಿಟ್ಟು ಬಿಡದೆ, ಅದೇನು ಕೆಲಸ ಮಾಡುವೆ ಹೇಳಮ್ಮ. ಕರೋನಾ ಕಾಡುತ್ತಿರುವಾಗ ದೂರದಿಂದ ಬೆಂಗಳೂರಿಗೇಕೆ ಬಂದೆ ಎಂದು ಒಂದೇ ಸಮನೆ ಪ್ರಶ್ನೆಗಳ ಸುರಿಮಳೆಗೈಯ್ಯುತ್ತಿದ್ದಳು. ಆಗಾಕೆ ತಡೆಯಲಾರದೆ, `ನಾನು ಅಮ್ಮನ ಕೆಲಸ ಮಾಡುವೆ’ ಎಂದಳು. ಅಲ್ಲಿದ್ದವರು ಮಾತ್ರವಲ್ಲ, ಕೇಳಿಸಿಕೊಂಡ ನಾನು ಕೂಡ ಒಂದರೆಕ್ಷಣ ಅವಕ್ಕಾದೆ. `ಅಮ್ಮನ ಕೆಲಸವೇ’ ಅಂತಹದ್ದೊಂದು ವೃತ್ತಿ ಇದೆಯೇ? ಎಂಬ ಆಶ್ಚರ್ಯದೊಂದಿಗೆ ನನಗರಿವಿಲ್ಲದೆ ನನ್ನ ಹೆಜ್ಜೆ ಭಾರವಾಗತೊಡಗಿತು.

`ಅಮ್ಮನ ಕೆಲಸ’, `ಅಮ್ಮನ ಕೆಲಸ’ ಎನ್ನುತ್ತಾ ದುಃಖ ಹೊತ್ತು ಸಾಗುತ್ತಿದ್ದಂತೆ ಖಾಸಗಿ ಶಾಲೆಯ ಶಿಕ್ಷಕಿ ಒಬ್ಬರು ಹೇಳಿದ ಘಟನೆಯೊಂದು ನೆನಪಾಯಿತು.

ಅದು ಸಿಪ್‍ಕಾಟ್ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಖಾಸಗಿ ಶಾಲೆ. ಅಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನು ಶಾಲೆಗೆ ದಾಖಲಿಸಲು ತೆರಳಿದ್ದಾಳೆ. ಶಾಲಾ ದಾಖಲಾತಿ ಅರ್ಜಿಯಲ್ಲಿ ತಂದೆ-ತಾಯಿಯ ಉದ್ಯೋಗದ ಕಲಂನ್ನು ತುಂಬಬೇಕಿತ್ತು. ತಂದೆಯ ಹೆಸರನ್ನು ಆಕೆ ದಾಖಲಿಸಿರುವುದಿಲ್ಲ. ತಾಯಿಯ ಹೆಸರನ್ನು ದಾಖಲಿಸಿ, ಉದ್ಯೋಗದ ಕಲಂನಲ್ಲಿ `ಅಮ್ಮನ ಕೆಲಸ’ ಎಂದು ನಮೂದಿಸಿದ್ದಾರೆ. ಇದನ್ನು ವರ್ಗೀಕರಿಸಲು ಸಾಧ್ಯವಿಲ್ಲ. ದಾಖಲಾತಿ ನೀಡಲಾಗುವುದಿಲ್ಲವೆಂಬ ಕಾರಣ ಕೊಟ್ಟು ಹೊರ ಕಳುಹಿಸಲಾಗಿದೆ. ಆಕೆ ಅದೆಷ್ಟೇ ವಿನಂತಿಸಿದರೂ, ಶಾಲೆಯ ಆಡಳಿತ ವರ್ಗ ದಾಖಲಿಸಿಕೊಳ್ಳಲು ಒಪ್ಪಿರುವುದೇ ಇಲ್ಲ. ಅನ್ಯ ದಾರಿ ಇಲ್ಲದೆ ಆಕೆ ಬಿ.ಇ.ಓ. ಮುಂದೆ ಹೋಗಿದ್ದಾರೆ. ನಂತರ ಶಾಲೆಯ ಮುಖ್ಯ ಶಿಕ್ಷಕಿ, ಕಾರ್ಯದರ್ಶಿಯನ್ನು ಮರುದಿನ ಕರೆಸಿ ವಿಚಾರಣೆ ನಡೆಸಲಾಗಿದೆ. ಅಲ್ಲಿ ಮತ್ತೆ ಬಿ.ಇ.ಓ. ನಿಮ್ಮ ಉದ್ಯೋಗ ಏನೆಂದು ಪ್ರಶ್ನಿಸಿದ್ದಾರೆ. ಆಗಾಕೆ ನನಗೆ ಖಂಡಿತವಾಗಿಯೂ ಉದ್ಯೋಗ ಇದೆ. ಅದು `ಅಮ್ಮನ ಕೆಲಸ’ ಎಂದೇ ಮತ್ತೆ ಹೇಳಿದ್ದಾರೆ.

ಇದೊಂದು ಕಗ್ಗಂಟಿನ ಪ್ರಶ್ನೆಯಾಯಿತಲ್ಲ ಎಂದು ಬಿ.ಇ.ಓ., ಶಾಲಾ ಆಡಳಿವರ್ಗ ಚಿಂತಾಕ್ರಾಂತವಾಗಿದೆ. ನಾನು ಮಾತೃತ್ವವನ್ನು `ವೃತ್ತಿ’ ಎಂದು ಪರಿಗಣಿಸಲು ಸಾಧ್ಯವಿಲ್ಲ. ಪರಿಗಣಿಸಲು ಯಾವುದೇ ಸರ್ಕಾರಿ ಸುತ್ತೋಲೆಗಳು ಇಲ್ಲವೆಂದು ಹೇಳಿ ಮುಂದಿನ ವಾರ ಬರಲು ಹೇಳಿ ಬಿ.ಇ.ಓ. ಸಾಗಹಾಕಿದ್ದಾರೆ. ಒಂದು ವಾರ ಬಿಟ್ಟು ಬಂದ ನಂತರ, ಅಲ್ಲಿದ್ದ ಗುಮಾಸ್ತರೊಬ್ಬರು ಬಿ.ಇ.ಓ. ಅನುಪಸ್ಥಿತಿಯಲ್ಲಿ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ನಿಮ್ಮ ವೃತ್ತಿ ಏನು? ಈ ಸಲ ಆಕೆ ಮತ್ತೆದೆ ಉತ್ತರ ನೀಡಲಿಲ್ಲ. `ಸೂಕ್ತ ಸಂಭಾವನೆ ಪಡೆದು ಮಗುವನ್ನು ಹೆತ್ತು, ಮಾನವ ಸಂಬಂಧವನ್ನು ಗಟ್ಟಿಗೊಳಿಸುವ ಕೆಲಸ’ ಮಾಡುವೆ ಎಂದಿದ್ದಾರೆ. ಇದನ್ನಾಲಿಸಿದ ಗುಮಾಸ್ತ ಒಂದರೆಕ್ಷಣ ಅವಕ್ಕಾಗಿದ್ದಾನೆ. ಮತ್ತೊಮ್ಮೆ `ನೀನೇನು ಮಾಡುವೆ’ ಎಂದು ಮರು ಪ್ರಶ್ನೆ ಹಾಕಿದ್ದಾರೆ. ಆಕೆ ಯಾವುದೇ ಗಡಿಬಿಡಿ ವ್ಯಕ್ತಪಡಿಸದೆ, ನಾನು ಎರಡು ಮಕ್ಕಳ ತಾಯಿ. ಇದೀಗ ಒಡೆಯನಿಗಾಗಿ ಮಗು ಹೆತ್ತುಕೊಡುವ ಕೆಲಸ ಮಾಡುತ್ತಿರುವೆ. ಪ್ರತಿದಿನ ವ್ಯಾಯಾಮ, ವಾಕಿಂಗ್, ವೈದ್ಯರೊಂದಿಗಿನ ಭೇಟಿ ಸೇರಿದಂತೆ ಕನಿಷ್ಠ 8 ಗಂಟೆಗಳ ಕಾಲ ಕಾರ್ಯರ್ನಿಹಿಸುವೆ. ಕೊರೋನಾ ಪೀಡನೆಯ ಕಾಲದಲ್ಲೂ ನನ್ನ ವೃತ್ತಿ ಅತ್ಯಂತ ಶ್ರಮ ಅಪೇಕ್ಷಿಸುತ್ತದೆ. ಅಲ್ಲದೆ ಸವಾಲಿನಿಂದಲೂ ಕೂಡಿದೆ. ಗಾಣದೆತ್ತಿನ ಕೆಲಸಕ್ಕಿಂತ ಇದು ನನ್ನೆರಡು ಮಕ್ಕಳ ಭವಿಷ್ಯ ರೂಪಿಸಲು ಸಹಕಾರಿಯಾಗಿದೆ ಎಂದರು. ಕೂತಿದ್ದ ಗುಮಾಸ್ತ ಮಾಸ್ಕ್ ಸರಿಪಡಿಸಿಕೊಂಡು ಎದ್ದು ನಿಂತು ಬಿ.ಇ.ಓ. ಕೊಠಡಿಗೆ ತೆರಳಿ “ಸಾರ್ ದಯವಿಟ್ಟು ಇವರ ಮಕ್ಕಳ ಅಕ್ಷರ ಕಲಿಕೆಗೊಂದು ದಾರಿ ಮಾಡಿಕೊಡಿ’’ ಎಂದಿದ್ದಾರೆ.

ಇವತ್ತು ಇದೇ ರೀತಿ ವರ್ಷಕ್ಕೆ 25 ಸಾವಿರಕ್ಕೂ ಅಧಿಕ ಮಕ್ಕಳನ್ನು `ಬಾಡಿಗೆ ತಾಯಂದಿರು’ ಹೆತ್ತು ಕೊಡುತ್ತಿದ್ದಾರೆ. ಹಾಲಿವುಡ್, ಬಾಲಿವುಡ್ ತಾರೆಯರು ತಮ್ಮ ದೇಹಾಕಾರ ಕೆಡಿಸಿಕೊಳ್ಳಲು ಮತ್ತು ಒಂಬತ್ತು ತಿಂಗಳು ತಮ್ಮ ವೃತ್ತಿ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳಲು ಸಿದ್ಧರಿಲ್ಲದೆಯೂ `ಬಾಡಿಗೆ ತಾಯ್ತನ’ದ ಮೊರೆ ಹೋಗುತ್ತಿದ್ದಾರೆ. ಶಾರುಖ್ ಖಾನ್, ಅಮೀರ್ ಖಾನ್, ಕರಣ್ ಜೋಹರ್, ಸೋಹೆಲ್ ಖಾನ್, ತುಷಾರ್ ಕಪೂರ್, ಲೀಸಾ ರೇ, ಕೃಷ್ಣ ಅವರುಗಳು ಕೂಡ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದಾರೆ.

ಇವರುಗಳಿಗೆ ಗೊತ್ತಿಲ್ಲ. ನಿಸರ್ಗ ಪ್ರತಿಯೊಂದು ಹೆಣ್ಣಿಗೂ ಸಮನ್ವಯ ಮತ್ತು ಮಾನಸಿಕ ಬದಲಾವಣೆಯನ್ನು ನೀಡಿ ಅಮ್ಮನಾಗಿಸುತ್ತದೆ. ಇದನ್ನರಿಯದೆ `ಹೆರಿಗೆ ನೋವು’, `ಅಸ್ವಸ್ಥತೆ’ಗೆ ಹೆದರಿ ತಾಯ್ತನದ ಸಂತೋಷವನ್ನು ಕಳೆದುಕೊಳ್ಳುತ್ತಿದ್ದಾರೆ.

`ಮಾತೃತ್ವ’ ಎಂಬುದು ಅದ್ಭುತ, ಅನೂಹ್ಯ, ವರ್ಣಿಸಲಾಗದ ಅನುಬಂಧ. ಹೊಸ ಪ್ರಪಂಚವನ್ನು ಕಾಣದ ಉದರದಲ್ಲಿ ಬೆಳೆಯುವ ಕೂಸಿನ ಬಗ್ಗೆ ವಿಶಿಷ್ಠ, ಅನಂತ, ಪ್ರೇಮ-ಮೋಹದ ಬಂಧವದು. ಇಂತಹ ತಾಯ್ತನದ ಸುಮಧುರ ಅನುಭೂತಿಯನ್ನು ಕೊಡಲಿಯಿಂದ ಸಿಗಿದು ಹಾಕಲಾಗುತ್ತಿದೆ. ಇದೇನೆ ಇದ್ದರೂ `ಬಾಡಿಗೆ ತಾಯಿ’ಯಾಗುವ ಹೆಣ್ಣು ತಾನು 9 ತಿಂಗಳು ಹೊತ್ತು, ಹೆತ್ತ ಕಂದನನ್ನು, ತಾನು ಪಡೆದ ದುಡ್ಡಿಗಾಗಿ ಭಾವನಾತ್ಮಕ ಪರಿಣಾಮಗಳಿಲ್ಲದೆ ಹಿಂತಿರುಗಿಸುತ್ತಾಳೆಂಬುದು ಅಸ್ವಾಭಾವಿಕ.

ನಾಳೆಗೆ ಮುಂದುವರೆಯಲಿದೆ….