ಮಂಗಳೂರು : ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಮುಂಬರುವ 5 ವರ್ಷಗಳಲ್ಲಿ 11000 ಕ್ಕೂ ಹೆಚ್ಚು ವಸತಿಗೃಹ ಮಾಡಲಾಗುತ್ತದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಹೇಳಿದರು. ಅವರು ಇಂದು ನಗರದ ಪಣಂಬೂರಿನ ಪೊಲೀಸ್ ಠಾಣಾ ಸಮೀಪ ನೂತನವಾಗಿ ನಿರ್ಮಿಸಿರುವ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸಾಲಿನ ಬಜೆಟ್‍ನಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರಿಗೆ 11000 ಕ್ಕೂ ಹೆಚ್ಚು ವಸತಿ ಗೃಹ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ, 2025 ರೊಳಗೆ ಈ ಕಾರ್ಯ ಪೂರ್ಣಗೊಳ್ಳಲಿದೆ ಇದರಿಂದಾಗಿ ರಾಜ್ಯದಲ್ಲಿ ಶೇ.60 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ವಸತಿ ಸೌಕರ್ಯ ದೊರಕಲಿದೆ ಎಂದರು.
ದ.ಕನ್ನಡ ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಗಳ 192 ವಸತಿಗೃಹ ನಿರ್ಮಾಣ ಮಾಡಬೇಕೆಂದು ಕೋರಿಕೆ ಬಂದಿದ್ದು, ಲಭ್ಯವಿರುವ ನಿವೇಶನದಲ್ಲಿ 100 ಕ್ಕೂ ಹೆಚ್ಚು ವಸತಿಗೃಹಗಳನ್ನು ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು, ಬಾಕಿ ಉಳಿದ ವಸತಿಗೃಹ ನಿರ್ಮಾಣಕ್ಕೆ ನಿವೇಶನ ಲಭ್ಯವಾದ ಕೂಡಲೇ ನಿರ್ಮಾಣ ಮುಂದಾಗಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಕಾರ್ಯ ಚಟುವಟಿಕೆಗಳನ್ನು ಚುರುಕುಗೊಳಿಸುವ ಉದ್ದೇಶದಿಂದ ಅಗತ್ಯವಿರುವ ಆಧುನಿಕ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.
ಪೊಲೀಸ್ ಸಿಬ್ಬಂದಿಗಳ ಕುಟುಂಬಗಳ ಕಲ್ಯಾಣಾಭಿವೃದ್ಧಿಗೆ ಅನೇಕ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಪೊಲೀಸ್ ಸಿಬ್ಬಂದಿ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ನೆರವು ಕಲ್ಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಗೃಹ ಸಚಿವರು ವಸತಿಗೃಹಗಳ ಕೀಗಳನ್ನು ಸಾಕೇಂತಿಕವಾಗಿ ವಿತರಿಸಿದರು.










