ಚಿಕ್ಕಮಗಳೂರು : ಜಿಲ್ಲಾಡಳಿತದ ವತಿಯಿಂದ ನವೆಂಬರ್ ೧೦ ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕೆ. ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಅವರು ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಟಿಪ್ಪು ಸುಲ್ತಾನ್ ಅವರ ಜನ್ಮದಿನಾಚರಣೆ ಕುರಿತು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಟಿಪ್ಪು ಸುಲ್ತಾನ್ ದಿನಾಚರಣೆಯನ್ನು ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ಮೂಲಕ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿದೆ ಅದರಂತೆ ಟಿಪ್ಪು ಸುಲ್ತಾನ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದರು. ಸಭಾ ಕಾರ್ಯಕ್ರಮವು ನವೆಂಬರ್ ೧೦ ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಮಧ್ಯಾಹ್ನ ೩.೦೦ ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಎಲ್ಲಾ ಜನಪ್ರತಿನಿಧಿಗಳು, ಗಣ್ಯರನ್ನು ಆಹ್ವಾನಿಸಲಾಗುವುದು ಹಾಗೂ ಟಿಪ್ಪು ಸುಲ್ತಾನ್ ಅವರ ಕುರಿತು ಉಪನ್ಯಾಸ ನೀಡಲು ಉತ್ತಮ ಉಪನ್ಯಾಸಕರನ್ನು ಆಹ್ವಾನಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಮಾತನಾಡಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರರ್ಸ್, ಬಟ್ಟಿಂಗ್ಸ್‌ಗಳನ್ನು ಹಾಕಬಾರದು ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು ಇದಕ್ಕೆ ಜನಾಂಗದ ಎಲ್ಲಾ ನಾಯಕರು ಸಹಕಾರ ನೀಡಬೇಕು ಎಂದರು. ಟಿಪ್ಪು ಸುಲ್ತಾನ್ ಜಯಂತಿಗೆ ಎಲ್ಲಾ ಜನಾಂಗದ ಜನರು ಆಗಮಿಸುವಂತೆ ಹೆಚ್ಚಿನ ಪ್ರಚಾರ ನೀಡಬೇಕೆಂದು ತಿಳಿಸಿದ ಅವರು ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ, ಪೊಲೀಸ್ ಉಪ ಅಧೀಕ್ಷಕ ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ|| ರಮೇಶ್, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮಂಜುನಾಥ್ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.










