ಪ್ರಿಯತಮನ ಜೊತೆ ಸೇರಿ ಗಂಡನ ಕೊಲೆ ಮಾಡಿಸಿದ್ದ ಪತ್ನಿ ಬಂಧನ…

174
firstsuddi

ಬೆಂಗಳೂರು : ಪ್ರಿಯತಮನೊಂದಿಗೆ ಸೇರಿಕೊಂಡು ಗಂಡನ ಕೊಲೆ ಮಾಡಿಸಿದ್ದ ಪತ್ನಿ ಸೇರಿ ಒಂಭತ್ತು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಶಫಿ ಹತ್ಯೆಯಾದ ವ್ಯಕ್ತಿ. ಶಫಿ ಪತ್ನಿ ತಸ್ನೀಮಬಾನು, ಪ್ರಿಯಕರ ಅಫ್ಸರ್ ಖಾನ್, ಸುಪಾರಿ ಪಡೆದ ತಬ್ರೇಜ್ ಪಾಷಾ, ಸೈಯದ್ ವಸೀಂ, ಭರತ್, ವೆಂಕಟೇಶ್, ಚೇತನ್, ಯುಗೇಂದ್ರ ಹಾಗೂ ಇಬ್ರಾಹಿಂ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ದುಗುಂಟೆಪಾಳ್ಯದಲ್ಲಿ ಮೊಹಮ್ಮದ್ ಶಫಿ ದಂಪತಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಶಫಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದರು. ಎರಡು ವರ್ಷಗಳ ಹಿಂದೆ ತಸ್ನೀಮಬಾನುಗೆ ಸಂಬಂಧಿಕರ ಕಾರ್ಯಕ್ರಮದಲ್ಲಿ ಅಪ್ಸರ್ ಖಾನ್ ಪರಿಚಯವಾಗಿದ್ದಾನೆ. ನಂತರ ಇವರಿಬ್ಬರ ನಡುವೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗಿತ್ತು. ಮೊಹಮ್ಮದ್ ಶಫಿಗೆ ಮೈಸೂರಿನಲ್ಲಿ ರಿಯಲ್ ಎಸ್ಟೇಟ್‍ನಲ್ಲಿ ಹಣ ಹೂಡಿಕೆ ಮಾಡಿಸಿ 5 ಲಕ್ಷ ರೂ. ಕಮೀಷನ್ ನೀಡುವುದಾಗಿ ಅಪ್ಸರ್ ಖಾನ್ ಭರವಸೆ ಕೊಟ್ಟಿದ್ದ, ಹೀಗಾಗಿ ಅಪ್ಸರ್ ಖಾನ್ ಆಗಾಗ ಶಫಿ ಮನೆಗೆ ಬಂದು ಹೋಗುತ್ತಿದ್ದ. ಎರಡು ವರ್ಷಗಳಿಂದ ವಿವಾಹೇತರ ಸಂಬಂಧ ಕೂಡ ಮುಂದುವರೆದಿತ್ತು.

ವಿವಾಹೇತರ ಸಂಬಂಧಕ್ಕೆ ಗಂಡ ಮೊಹಮ್ಮದ್ ಶಫಿ ಅಡ್ಡಿ ಬರುತ್ತಾನೆಂದು ಭಾವಿಸಿ ಪತ್ನಿ ತಸ್ನೀಮಬಾನು ತನ್ನ ಪ್ರಿಯತಮ ಅಪ್ಸರ್ ಖಾನ್ ಜೊತೆ ಸೇರಿ ಗಂಡನ ಕೊಲೆಗೆ ಸುಪಾರಿ ಕೊಡಲು ತೀರ್ಮಾನಿಸಿದ್ದಳು. ಅದರಂತೆ ಅಪ್ಸರ್ ಖಾನ್ 2 ಲಕ್ಷ ರೂ.ಹಣಕ್ಕೆ ತನಗೆ ಪರಿಚಯವಿದ್ದ ತಬ್ರೇಜ್ ಪಾಷಾ ಹಾಗೂ ಸೈಯ್ಯದ್ ವಸೀಂಗೆ ಸುಪಾರಿ ನೀಡಿದ್ದರು. ಮಾ.19 ರಂದು ಕಮೀಷನ್ ಹಣ ನೀಡುವುದಾಗಿ ಮೊಹಮ್ಮದ್ ಶಫಿಯನ್ನು ಅಪ್ಸರ್ ಖಾನ್ ನ್ಯೂ ಟಿಂಬರ್ ಗಲ್ಲಿಗೆ ಕರೆಯಿಸಿಕೊಂಡಿದ್ದನು. ಅಲ್ಲಿಗೆ ಬಂದಿದ್ದ ಶಫಿಯನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು.

ಮೃತ ಮೊಹಮ್ಮದ್ ಶಫಿಯ ತಂದೆ ನೀಡಿರುವ‌ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಮಹಮ್ಮದ್ ಶಫಿ ಪತ್ನಿ ಹಾಗೂ ಅಪ್ಸರ್ ಖಾನ್‍ನ ವಿವಾಹೇತರ ಸಂಬಂಧ ಬೆಳಕಿಗೆ ಬಂದಿದೆ. ಹೀಗಾಗಿ ಪೊಲೀಸರು ಶಫಿ ಪತ್ನಿ ತಸ್ನೀಮಬಾನುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ.