ಬೆಂಗಳೂರು : ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತ ಕೋವಿಡ್ ಮರಣ ಪ್ರಮಾಣದಲ್ಲೂ ಸಹ ಏರಿಕೆ ಕಂಡಿದೆ. ನಿತ್ಯ ಹತ್ತಾರು ಅಂಬುಲೆನ್ಸ್ ಗಳು ಚಿತಾಗಾರಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿವೆ. ಇಂತಹ ಪರಿಸ್ಥಿತಿ ಯಲಹಂಕದ ಮೇಡಿ ಸ್ಮಶಾನದಲ್ಲಿ ಕಂಡುಬಂದಿದೆ.
ಮೇಡಿ ಅಗ್ರಹಾರದ ಅಗ್ನಿ ಚಿತಾಗಾರದಲ್ಲಿ ಇಂದು ಬೆಳಗ್ಗೆಯಿಂದಲೂ ಶವಗಳಿರುವ ಆ್ಯಂಬುಲೆನ್ಸ್ ಗಳು ಸರತಿಯಲ್ಲಿ ನಿಂತಿವೆ. ಬೆಳಗ್ಗೆ 7 ರಿಂದ ರಾತ್ರಿ 12 ಗಂಟೆಗಳಾದರೂ ಶವಗಳು ಮುಗಿಯುತ್ತಿಲ್ಲ. ಒಂದೊಂದು ಹೆಣ ಸುಡಲೂ ಒಂದರಿಂದ ಒಂದೂವರೆ ಗಂಟೆ ಸಮಯ ಹಿಡಿಯುತ್ತಿದೆ. ಮೇಡಿ ಅಗ್ರಹಾರ, ಸುಮನಹಳ್ಳಿ, ಬೊಮ್ಮಹಳ್ಳಿ, ಕೆಂಗೇರಿ, ಪೆನತ್ತೂರುಗಳಲ್ಲಿ 5 ಚಿತಾಗಾರಗಳಲ್ಲಿ ಕೋವಿಡ್ ಶವ ಸುಡಲು ಅವಕಾಶ ನೀಡಲಾಗಿದೆ. ಆದರೆ ಎರಡು ಕಡೆ ಯಂತ್ರ ಕೆಟ್ಟು ಹೋಗಿದೆ. ಹೀಗಾಗಿ ಉಳಿದ ಶವಾಗಾರಗಳಲ್ಲಿ ಒತ್ತಡ ಹೆಚ್ಚಿದ್ದು, ಸರತಿಯಲ್ಲಿ ನಿಲ್ಲುವವರ ಸಂಖ್ಯೆ ಹೆಚ್ಚುತ್ತಿದೆ.
ಇದರ ನಡುವೆಯೂ ಸ್ಮಶಾನದಲ್ಲಿ ಕೆಲಸ ಮಾಡುವ ನೌಕರರಿಗೆ ಸರಿಯಾದ ಸೌಲಭ್ಯ ಇಲ್ಲ. ಮಾಸ್ಕ್, ಗ್ಲೌಸ್ , ಪಿಪಿಇ ಕಿಟ್, ಸ್ಯಾನಿಟೈಸರ್ ಕೂಡಾ ಕೊಟ್ಟಿಲ್ಲ. ನಮಗೆ ಜೀವ ಭಯ ಕಾಡುತ್ತಿದೆ ಎಂದು ಸಿಬ್ಬಂದಿಗಳು ಆತಂಕವನ್ನು ಹೊರಹಾಕುತ್ತಿದ್ದಾರೆ.










