ಅಪ್ರಾಪ್ತೆ ಮೊಬೈಲ್ ಗೆ ಅಶ್ಲೀಲ ಸಂದೇಶ ; ಗ್ರಾಪಂ ಸದಸ್ಯನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು…

109
firstsuddi

ಚಿಕ್ಕಬಳ್ಳಾಪುರ : ಅಪ್ರಾಪ್ತೆ ಮೊಬೈಲ್ ಗೆ ಅಶ್ಲೀಲ ಸಂದೇಶವನ್ನು ರವಾನಿಸಿರುವ ಅರೋಪದಡಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಆತನ ಸ್ನೇಹಿತನ ವಿರುದ್ಧ ಪೋಕ್ಸೋ ಆರೋಪದಡಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಕಮ್ಮಗುಟ್ಟಹಳ್ಳಿಯ ಗ್ರಾಪಂ ಸದಸ್ಯ ರಾಮಪಟ್ನ ಗ್ರಾಮದ ಶ್ರೀನಿವಾಸ ಮತ್ತು ಆತನಿಗೆ ಸಾಥ್ ನೀಡಿದ ಸ್ನೇಹಿತ ಕೇಶವ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.ಆರೋಪಿಗಳಾದ ಶ್ರೀನಿವಾಸ್ ಹಾಗೂ ಕೇಶವ್ ಇಬ್ಬರು ಸಹ ತಲೆಮರೆಸಿಕೊಂಡಿದ್ದಾರೆ. ಇವರು ಬಾಲಕಿಯ ಮೊಬೈಲ್ ಗೆ ಅಶ್ಲೀಲ ಸಂದೇಶ, ಫೋಟೋ ಮತ್ತು ವಾಯ್ಸ್ ಮೆಸೇಜ್ ಗಳನ್ನು ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಪ್ರಾಪ್ತ ಬಾಲಕಿ ಆನ್ ಲೈನ್ ಶಿಕ್ಷಣ ಪಡೆಯುವ ಸಲುವಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು. ಬಾಲಕಿಯ ಖಾತೆಗೆ ಸರ್ಕಾರದಿಂದ ಪ್ರೋತ್ಸಾಹ ಧನ ವರ್ಗಾವಣೆ ಆಗಿತ್ತು. ಆ ಹಣವನ್ನು ಡ್ರಾ ಮಾಡಲು ಆಕೆಯ ಆಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಪಡೆದುಕೊಂಡಿದ್ದ ಆರೋಪಿ ಶ್ರೀನಿವಾಸ ಬಾಲಕಿಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ. ಈತನಿಗೆ ಸ್ನೇಹಿತ ಕೇಶವ ಎಂಬಾತ ಸಾಥ್ ನೀಡುತ್ತಿದ್ದ ಎಂದು ದೂರಿನಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ.