ಬೆಂಗಳೂರು : ತಾನು ಪ್ರೀತಿಸುತ್ತಿದ್ದ ಹುಡುಗಿಯ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ಪ್ರಿಯಕರ ನೇಣಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಟಿಕ್ ಟಾಕ್ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿಯಾಗಿದ್ದ 17 ವರ್ಷದ ರಕ್ಷಿತಾ ಎಂಬ ಯುವತಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಗರದ ಚಿಕ್ಕಸಂದ್ರದ ವರಮಹಾಲಕ್ಷ್ಮಿ ಮತ್ತು ಕೃಷ್ಣಪ್ಪನವರ ಪುತ್ರಿ ಮೃತ ರಕ್ಷಿತ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ಟಿಕ್ ಟಾಕ್ ವಿಡಿಯೋಗಳು ಸಖತ್ ವೈರಲ್ ಆಗಿದ್ದವು. ಅಪ್ಪ-ಅಮ್ಮ ಮದುವೆಗೆಂದು ತೆರಳಿದ್ದಾಗ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ಸದ್ಯ ಮರಣೋತ್ತರ ಪರೀಕ್ಷೆಗೆ ಯುವತಿ ಮೃತದೇಹವನ್ನು ಸಪ್ತಗಿರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಪ್ರಿಯತಮೆಯ ಸಾವಿನ ಸುದ್ದಿ ಕೇಳಿ ಪ್ರಿಯಕರನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ಉತ್ತರ ತಾಲೂಕಿನ ಹನಿಯೂರು ಗ್ರಾಮದ ನಿವಾಸಿಯಾಗಿದ್ದ ಮನೋಜ್(21) ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಬೆಳಗ್ಗೆ ಪ್ರೇಯಸಿಗೆ ಕರೆ ಮಾಡಿದ್ದಾಗ ಆತ್ಮಹತ್ಯೆ ಮಾಹಿತಿ ತಿಳಿದುಬಂದಿದ್ದು, ವಿಷಯ ತಿಳಿಯುತ್ತಿದ್ದಂತೆ ಮನೋಜ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಟಿಕ್ ಟಾಕ್ ವಿಡಿಯೋ ಮಾಡುತ್ತಿದ್ದ ಬಾಲಕಿ ರಕ್ಷಿತಾ ಮತ್ತು ಮನೋಜ್ (20) ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ. ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










