ಬೆಂಗಳೂರು : ಅಪ್ರಾಪ್ತರ ಗ್ಯಾಂಗ್ ಕಟ್ಟಿಕೊಂಡು ಬೈಕ್ ಗಳನ್ನು ಕಳ್ಳತನ ಮಾಡಿಸುತ್ತಿದ್ದ ಕಾನ್‍ಸ್ಟೇಬಲ್ ನನ್ನು ಮಾಗಡಿ ರೋಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಾನ್‍ಸ್ಟೇಬಲ್ ಹೊನ್ನಪ್ಪ ರವಿ ಬಂಧಿತ ಆರೋಪಿ. ಈತ ಅಪ್ರಾಪ್ತರನ್ನು ಬಳಸಿಕೊಂಡು ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್ಗಳನ್ನು ಕಳ್ಳತನ ಮಾಡಿಸುತ್ತಿದ್ದ. ಕೃತ್ಯದಲ್ಲಿ ಭಾಗಿಯಾಗಿದ್ದ ತಮಿಳುನಾಡು ಮೂಲದ ಇಬ್ಬರು ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಬಂಧಿತರಿಂದ 77 ಲಕ್ಷ ರೂಪಾಯಿ ಮೌಲ್ಯದ 53 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ.
2016ರ ಬ್ಯಾಚ್ ನ ಸಿವಿಲ್ ಕಾನ್‍ಸ್ಟೇಬಲ್ ಆಗಿರುವ ಹೊನ್ನಪ್ಪ ರವಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಆಗಿ ಕಾರ್ಯನಿರ್ವಹಿಸುತ್ತಿದ್ದ. ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿರುವ ಹೊನ್ನಪ್ಪ ಅಪ್ರಾಪ್ತರಿಂದ ಬೈಕ್ ಕಳ್ಳತನ ಮಾಡಿಸಿದರೆ ಕಾನೂನು ಪ್ರಕಾರ ಅವರನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಅರಿತುಕೊಂಡಿದ್ದ. ಹೀಗಾಗಿ ದುಬಾರಿ ಬೆಲೆಯ ಹಾಗೂ ಹೆಚ್ಚು ಬೇಡಿಕೆಯಿರುವ ಬೈಕ್ ಗಳನ್ನೇ ಕಳ್ಳತನ ಮಾಡಲು ಪ್ರೇರೆಪಿಸುತ್ತಿದ್ದ.
ಕಳ್ಳತನ ಮಾಡಿದ ಬೈಕ್ ಗಳನ್ನು ವಿದ್ಯಾರಣಪುರದಲ್ಲಿನ ಕಾನ್‍ಸ್ಟೇಬಲ್ ಮನೆಗೆ ತಂದುಕೊಡುತ್ತಿದ್ದರು. ಬಳಿಕ ಒಎಲ್ ಎಕ್ಸ್ ಜಾಲತಾಣದಲ್ಲಿ ಮಾರಾಟಕ್ಕಿರುವ ಅಸಲಿ ಬೈಕ್ ಗಳ ರಿಜಿಸ್ಟರ್ ನಂಬರ್ ನೋಡಿ ತಾವು ಕದ್ದಿರುವ ಬೈಕ್ಗಳ ನಂಬರ್ ಅಳಿಸಿ ಬೇರೆ ಬೇರೆ ರಿಜಿಸ್ಟರ್ ನಂಬರ್ ಹಾಕಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಸದ್ಯ ಕಾನ್ ಸ್ಟೇಬಲ್ ನನ್ನು ವಶಕ್ಕೆ ಪಡೆದಿರುವ ಮಾಗಡಿ ರೋಡ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.










