ಬೆಂಗಳೂರು : ಇಂದು ನಾಡಿನಾದ್ಯಂತ 2022ರ ಹೊಸ ವರ್ಷದ ಸಂಭ್ರಮ. ಈ ಹಿನ್ನಲೆ ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಶುಭಾಶಯ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಸಿಎಂ ಬೊಮ್ಮಾಯಿ ಅವರು, ನಾಡಿನ ಸಮಸ್ತ ಜನತೆಗೆ 2022ರ ಹೊಸ ವರ್ಷದ ಹೃತ್ಪೂರ್ವಕ ಶುಭಾಶಯಗಳು. ಹೊಸ ಭರವಸೆಯೊಂದಿಗೆ ನೂತನ ವರ್ಷ ಸ್ವಾಗತಿಸುವ ಈ ಸಂಭ್ರಮದ ಸಮಯದಲ್ಲಿ ನಾವೆಲ್ಲರೂ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸೋಣ. ತಪ್ಪದೇ ಮಾಸ್ಕ್ ಧರಿಸಿ, ಭೌತಿಕ ಅಂತರ ಕಾಯ್ದುಕೊಂಡು, ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸೋಣ, ಇದೇ ದೃಢ ಸಂಕಲ್ಪದೊಂದಿಗೆ ನವ ವರ್ಷವನ್ನು ಸ್ವಾಗತಿಸೋಣ ಎಂದು ತಿಳಿಸಿದ್ದಾರೆ.
ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳು. ಭಗವಂತನು ಎಲ್ಲರಿಗೂ ಉತ್ತಮ ಆರೋಗ್ಯ, ಶಾಂತಿ, ಸಮೃದ್ಧಿ ಹಾಗೂ ಸದ್ಬುದ್ದಿಯನ್ನು ನೀಡಿ ಹರಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಎಲ್ಲೆಡೆ ಮತ್ತೊಮ್ಮೆ ಕೋವಿಡ್ ಭೀತಿ ಹೆಚ್ಚಾಗುತ್ತಿದ್ದು, ಯಾವುದೇ ಕಾರಣಕ್ಕೂ ಎಚ್ಚರ ತಪ್ಪದೆ, ಜಾಗರೂಕತೆಯಿಂದ ಹೊಸ ವರ್ಷವನ್ನು ಸ್ವಾಗತಿಸಿ ಎಂದು ಕರೆ ನೀಡಿದ್ದಾರೆ.
ಎಲ್ಲರಿಗೂ ನೂತನ ವರ್ಷದ ಶುಭಾಶಯಗಳು. ಹೊಸ ವರ್ಷವು ನವಚೈತನ್ಯ, ನವೋತ್ಸಾಹಗಳನ್ನು ಹೊತ್ತು ತರಲಿ. ಕಳೆದು ಹೋದ ದಿನಗಳ ನೋವು ಮರೆತು, ಹೊಸ ಭರವಸೆಯೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಾಂಕ್ರಾಮಿಕದ ಸಂಕಷ್ಟಗಳನ್ನು ಗೆದ್ದು, ಸುಖ, ಸಂತೋಷ, ಯಶಸ್ಸುಗಳ ಆರೋಗ್ಯ ಪೂರ್ಣ ಸಮಾಜವನ್ನು ಕಟ್ಟೋಣ. ಎಲ್ಲರ ಕನಸುಗಳು ಈಡೇರಲಿ, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಟ್ವೀಟ್ ಮಾಡಿ ಹಾರೈಸಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ,ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದ ಮೂಲಕ, ಭಾರತವನ್ನು ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ದೇಶವಾಗಿ ಕಟ್ಟುವ ನಮ್ಮ ನಿಮ್ಮೆಲ್ಲರ ಪ್ರಯತ್ನದ ‘ಕೈ’ಗಳು ಹೊಸ ವರ್ಷದಲ್ಲಿ ಇನ್ನಷ್ಟು ಬಲಶಾಲಿಯಾಗಲಿ ಎಂದಿದ್ದಾರೆ.
ಸಮಸ್ತ ಕನ್ನಡಿಗರಿಗೆ ಹೊಸ ವರ್ಷದ ಶುಭಾಶಯಗಳು. 2022ರಲ್ಲಿ ಎಲ್ಲರಿಗೂ ನವಚೈತನ್ಯ ತುಂಬಿ, ಉತ್ತಮ ಆಯುರಾರೋಗ್ಯವನ್ನು ಆ ಭಗವಂತ ಕರುಣಿಸಲಿ. ಕರುನಾಡಿನಲ್ಲಿ ಸುಖ-ಶಾಂತಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸುತ್ತೇನೆ. ಮಾರಕ ವೈರಸ್ ಮಾರಿ ಮತ್ತೆ ವಿಜೃಂಭಿಸುತ್ತಿದ್ದು, ಯಾರೂ ಎಚ್ಚರ ತಪ್ಪುವುದು ಬೇಡ ಎನ್ನುವುದು ನನ್ನ ಕಳಕಳಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.










