ವಿಕೃತಿ ಮೆರೆದ ಪಾಪಿ ಪತಿ..! 3 ತಿಂಗಳ ಗರ್ಭಿಣಿ ಪತ್ನಿ ಮೇಲೆ ಡೀಸೆಲ್ ಸುರಿದು ಕೊಲೆಗೆ ಯತ್ನ…

79
firstsuddi

ಬೆಂಗಳೂರು : ಪತಿಯೊಬ್ಬ ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಗರದಲ್ಲಿ ನಡೆದಿದೆ.

ಮಾರ್ಚ್ 9 ರಂದು ನಗರದ ಬೈಯಪ್ಪನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಬಾಬು(37)ನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೂ ಗಾಯಾಳು ಪತ್ನಿ ಮೀನಾ (23) ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಏಳು ವರ್ಷದ ಹಿಂದೆ ಮೀನಾ ವಿಜಯಕಾಂತ್ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ 3 ಜನ ಹೆಣ್ಣು ಮಕ್ಕಳಿದ್ದಾರೆ. ಆದರೆ ದುರದೃಷ್ಟವಷಾತ್ ಮೂರು ವರ್ಷದ ಹಿಂದೆ ವಿಜಯಕಾಂತ್ ತೀರಿಹೋಗಿದ್ದರು. ನಂತರ ಮೀನಾಗೆ ಬಾಬು ಎಂಬಾತನ ಪರಿಚಯವಾಗಿತ್ತು. ಬಳಿಕ ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು.

ಇವರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ ಮೀನಾ ಕೂಲಿ ಮಾಡಿ ಕೂಡಿಟ್ಟ ಹಣವನ್ನೆಲ್ಲಾ ಅವನು ಕುಡಿದು ಹಾಳು ಮಾಡುತ್ತಿದ್ದನು. ಈ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಲೇ ಇತ್ತು. ಮಾರ್ಚ್ 9 ರಂದು ದಂಪತಿಯ ನಡುವೆ ಜಗಳ ನಡೆದಿದ್ದು, ಪತ್ನಿಯು ಇನ್ನೂ ದುಡ್ಡು ಕೇಳಿದರೆ ನಾನು ಮೈ ಮೇಲೆ ಡೀಸೆಲ್ ಸುರಿದುಕೊಂಡು ಸತ್ತು ಹೋಗುತ್ತೆನೆ ಎಂದಿದ್ದಾರೆ.

ಈ ವೇಳೆ ಪತಿ ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆಂದು ಸ್ಟೌನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೇ ಮೀನಾರ ಮೊದಲ ಪತಿಗೆ ಜನಿಸಿದ್ದ ಹೆಣ್ಣು ಮಗುವನ್ನು ಕೂಡಾ ಕಚ್ಚಿ ವಿಕೃತಿ ಮೆರೆದಿದ್ದಾನೆ. ಇದೀಗ ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.