ದಕ್ಷಿಣ ಕನ್ನಡ : ಮನೆಗೆ ನುಗ್ಗಿ ನಗದು ಮತ್ತು ಚಿನ್ನಾಭರಣ ದರೋಡೆ ಮಾಡಿದ ಇಬ್ಬರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 71.52 ಗ್ರಾಂ ಚಿನ್ನಾಭರಣಗಳು ಮತ್ತು 11590 ರೂಪಾಯಿ ನಗದು ವಶಪಡಿಸಕೊಳ್ಳಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾರ್ಚ್ 20 ರಂದು ರಾತ್ರಿ ವೇಳೆಯಲ್ಲಿ ಸುಳ್ಯ ತಾಲೂಕು ಸಂಪಾಜೆ ಗ್ರಾಮದ ಚಟ್ಟೆಕಲ್ಲು ಎಂಬಲ್ಲಿ ಅಂಬರೀಶ್ ಅವರ ಮನೆಗೆ ನುಗ್ಗಿದ ಆರೋಪಿಗಳು ಸುಮಾರು 1,52000 ನಗದು ಮತ್ತು ಸುಮಾರು 83 ಗ್ರಾಂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು. ಈ ಕುರಿತು ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನಾವನೆ ಋಷಿಕೇಶ್ ಭಗವಾನ್ ಮತ್ತು ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಕುಮಾರಚಂದ್ರ ಸೂಚನೆಯಂತೆ ಡಿವೈಎಸ್ಪಿ ಕು ಗಾನಾ ಪಿ ಕುಮಾರ್, ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿತ್ತು. ಅದರಂತೆ ಕಾರ್ತಿಕ್, ಯಧುಕುಮಾರ್, ದೀಕ್ಷೀತ್ ಕೆ ಎನ್ ಮತ್ತು ಬಿ ನರಸಿಂಹನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆಸಿ ಪ್ರಕರಣದಲ್ಲಿ ಉಳಿದ ಆರೋಪಿಗಳಾದ ತಮಿಳುನಾಡು ನಿವಾಸಿ ಸೆಂಥಿಲ್ ಮತ್ತು ಪಾಂಡಿಸೆಲ್ವಂ ರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.










