ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಹಿರಿಯ ಪ್ರಾಧ್ಯಾಪಕ ಬಂಧನ…

59
firstsuddi

ಬೆಂಗಳೂರು : ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ವಿವಿ ಭೂಗೋಳಶಾಸ್ತ್ರದ ಹಿರಿಯ ಪ್ರಾಧ್ಯಾಪಕನನ್ನು ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದಾರೆ.

ಧಾರವಾಡ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರಿಗೆ ಪ್ರಶ್ನೆಪತ್ರಿಕೆ ತಯಾರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿತ್ತು. ಇದರಂತೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವಾಗ ಭೂಗೋಳಶಾಸ್ತ್ರದ ಅತಿಥಿ ಉಪನ್ಯಾಸಕಿಯಾಗಿದ್ದ ಸೌಮ್ಯ ಅವರಿಗೆ ಪ್ರಶ್ನೆಗಳನ್ನು ಸಿದ್ದಪಡಿಸಲು ನಾಗರಾಜ್ ಹೇಳಿದ್ದರಂತೆ. ಇದರಂತೆ ಪ್ರಶ್ನೆಗಳನ್ನ ಸಿದ್ದಪಡಿಸಿ ಸೌಮ್ಯ ನೀಡಿದ್ದರು. ಗುರುಗಳಿಗೆ ಕಳಿಸಿದ್ದ ಪ್ರಶ್ನೆಗಳನ್ನ ಪರೀಕ್ಷೆಗೂ ಅರ್ಧ ಗಂಟೆ ಮೊದಲು ಸೌಮ್ಯ ಸ್ನೇಹಿತೆಯರಿಗೆ ಕಳುಹಿಸಿದ್ದರಂತೆ. ಅಕ್ರಮದಲ್ಲಿ ಭಾಗಿ ಹಿನ್ನೆಲೆ ಸದ್ಯ ನಾಗರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಈ ಬಗ್ಗೆ ಪೊಲೀಸ್ ಕಮೀಷನರ್ ಕಮಲ್ ಪಂತ್ ಮಾತನಾಡಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಮಾರ್ಚ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಆ ವೇಳೆ ಕೆಲವು ಅಭ್ಯರ್ಥಿಗಳಿಗೆ ಪ್ರಶ್ನೆಗಳು ಸಿಕ್ಕಿತ್ತು. ಈ ಸಂಬಂಧ ಪರೀಕ್ಷಾ ಪ್ರಾಧಿಕಾರ ದೂರು ನೀಡಿದ್ದರು. ಕೇಸ್ ದಾಖಲಿಸಿಕೊಂಡ ಎಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಸದ್ಯ ಇಬ್ಬರು ಆರೋಪಿಗಳನ್ನ ಬಂಧಿಸಿದ್ದೇವೆ ಎಂದರು.