ಪರೀಕ್ಷೆಗೆ ಹಿಜಾಬ್ ಧರಿಸಿ ಬಂದಿದ್ದಕ್ಕೆ ನಿರಾಕರಣೆ ; ಆಕ್ರೋಶ ಹೊರಹಾಕಿದ ವಿದ್ಯಾರ್ಥಿನಿ…

143
firstsuddi

ಶಿವಮೊಗ್ಗ : ಹಿಜಬ್ ಧರಿಸಿದ್ದ ಕಾರಣ ಪರೀಕ್ಷೆ ಬರೆಯಲು ಬಿಡುತ್ತಿಲ್ಲ ಎಂದು ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ವೀಡಿಯೋ ಮೂಲಕ ಆಕ್ರೋಶ ಹೊರ ಹಾಕಿದ್ದಾಳೆ.

ಜಿಲ್ಲೆಯ ಡಿವಿಎಸ್ ಕಾಲೇಜಿನ ಕೊನೆಯ ವರ್ಷದ ಬಿಎ ವಿದ್ಯಾರ್ಥಿನಿ ಶಾಹಿನ್ ಪರೀಕ್ಷೆ ಬರೆಯಲು ಕಾಲೇಜಿಗೆ ಆಗಮಿಸಿದ್ದರು. ಆದರೆ ಆಕೆ ಹಿಜಾಬ್ ಧರಿಸಿದ್ದ ಕಾರಣ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ಅವಕಾಶ ನಿರಾಕರಿಸಿದೆ. ಆಡಳಿತ ಮಂಡಳಿ ನಿರ್ಧಾರ ವಿರುದ್ಧ ಶಾಹಿನ್ ತನ್ನ ಆಕ್ರೋಶವನ್ನು ವೀಡಿಯೋ ಮುಖಾಂತರ ಹೊರ ಹಾಕಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಾನು ಬಿಎ ಕೊನೆಯ ವರ್ಷದ ವಿದ್ಯಾರ್ಥಿನಿ. ಹಿಜಾಬ್ ಧರಿಸಿದ್ದ ಕಾರಣಕ್ಕೆ ನನಗೆ ತರಗತಿ ಪ್ರವೇಶಿಸಲು ಸಹ ಅನುಮತಿ ನೀಡುತ್ತಿಲ್ಲ. ನನ್ನ ಎಲ್ಲಾ ಸ್ನೇಹಿತರು ಪರೀಕ್ಷೆ ಬರೆಯುತ್ತಿದ್ದಾರೆ. ಹಿಜಾಬ್ ಧರಿಸಿದ್ದ ಕಾರಣ ನನಗೆ ಪರೀಕ್ಷೆಗೆ ಅವಕಾಶ ನೀಡುತ್ತಿಲ್ಲ. ನನ್ನ ಭವಿಷ್ಯ ಮತ್ತು ಕನಸನ್ನ ಹತ್ತಿಕ್ಕುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ರಾಜಕೀಯ ಕಾರಣಕ್ಕಾಗಿ ನಮಗೆ ಹೀಗೆಲ್ಲ ಮಾಡುತ್ತಿದ್ದಾರೆ. ನಾವು ಮತ್ತೆ ನಮ್ಮ ಹಕ್ಕಿನೊಂದಿಗೆ ವಾಪಸ್ ಆಗುತ್ತೇವೆ ಎಂದು ವಿದ್ಯಾರ್ಥಿನಿ ವಿಡಿಯೋದಲ್ಲಿ ಹೇಳಿದ್ದಾಳೆ.