ಮತ್ತೊಂದು ಹೊಸ ದಾಖಲೆ ಬರೆದ ಚಿನ್ನದ ಹುಡುಗ ನೀರಜ್ ಚೋಪ್ರಾ.

100
firstsuddi

ನವದೆಹಲಿ : ಒಲಿಂಪಿಕ್ಸ್ ನಲ್ಲಿ ಚಿನ್ನಗೆದ್ದು ದಾಖಲೆ ಬರೆದಿದ್ದ ಭಾರತದ ಜಾವೆಲಿನ್ ಥ್ರೋ ಕ್ರೀಡಾಪಟು ನೀರಜ್ ಚೋಪ್ರಾ ಇದೀಗ ಮತ್ತೊಂದು ದಾಖಲೆ ಮಾಡಿದ್ದಾರೆ. ಫಿನ್ ಲ್ಯಾಂಡ್ ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್ ನಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕ ಗೆಲ್ಲುವ ಮೂಲಕ ನೀರಜ್ ಹಿಂದೆ ತಾವೇ ನಿರ್ಮಿಸಿದ್ದ ರಾಷ್ಟ್ರೀಯ ದಾಖಲೆ ಮುರಿದಿದ್ದಾರೆ.

ಈ ಕ್ರೀಡಾಕೂಟದಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ನೀರಜ್ ದ್ವೀತಿಯ ಸ್ಥಾನ ಪಡೆದರೆ, ಫಿನ್ ಲೆಂಡ್ ದೇಶದ ಸ್ಥಳೀಯ ಜಾವೆಲಿನ್ ಪಟು ಓಲಿವರ್ ಹೆಲಂದರ್ 89.83 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಗ್ರೆನಡಾದ ವಿಶ್ವ ಚಾಂಪಿಯನ್ ಆಂಡರ್ಸನ್ ಪೀಟರ್ಸ್ 86.60 ಮೀಟರ್ ದೂರಕ್ಕೆ ಭರ್ಜಿ ಎಸೆದು ಮೂರನೇ ಸ್ಥಾನ ಪಡೆದರು.

ನೀರಜ್ ಚೋಪ್ರಾ ಜಪಾನ್ ನಲ್ಲಿ ನಡೆದ ಟೋಕಿಯೋ ಒಲಿಂಪಿಕ್ಸ್ ಬಳಿಕ ಪಾಲ್ಗೊಂಡ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ಇದಾಗಿದೆ. 2021, ಆಗಸ್ಟ್ 7ರಂದು ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ 87.58 ಮೀಟರ್ ದೂರಕ್ಕೆ ಭರ್ಜಿ ಎಸೆದು ದಾಖಲೆ ಬರೆದಿದ್ದರು.