ಬೆಂಗಳೂರು ಲಕ್ಷಾಂತರ ಜನರಿಗೆ ಕನಸಿನ ನಗರ: ಮೋದಿ.

64
firstsuddi

ಬೆಂಗಳೂರು : ಬೆಂಗಳೂರು ಲಕ್ಷಾಂತರ ಜನರಿಗೆ ಕನಸಿನ ನಗರವಾಗಿದೆ. ಬೆಂಗಳೂರಿನ ಅಭಿವೃದ್ಧಿಯಿಂದ ಲಕ್ಷಾಂತರ ಕನಸುಗಳ ವಿಕಾಸವಾಗಲಿದೆ. ಹಾಗಾಗಿ ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧವಾಗಿದ್ಧೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭರವಸೆ ನೀಡಿದರು.

ನಗರದ ಕೊಮ್ಮಘಟ್ಟದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ಇಂದು ಮಹತ್ವದ ದಿನವಾಗಿದೆ. ಕರ್ನಾಟಕದಲ್ಲಿ ಹಲವು ಮೂಲಭೂತ ಯೋಜನೆಗಳನ್ನು ಕಲ್ಪಿಸುವ ಯೋಜನೆಗಳಿಗೆ ಚಾಲನೆ ಕೊಟ್ಟಿರುವುದು ನಮಗೆ ಸಂತೋಷ ತಂದಿದೆ ಎಂದರು.

ಎರಡು ದಿನಗಳ ರಾಜ್ಯ ಪ್ರವಾಸದ ವೇಳೆ 33 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದು, ಮೊದಲ ದಿನವಾದ ಇಂದು 27 ಸಾವಿರ ಕೋಟಿ ವೆಚ್ಚದ ಯೋಜನೆಗಳ ಲೋಕಾರ್ಪಣೆ, ಶಂಕುಸ್ಥಾಪನೆ ಆಗಿದೆ. ಹಲವು ಯೋಜನೆಗಳ ಮೂಲಕ ಜನರ ಸೇವೆಗೆ ಅವಕಾಶ ಸಿಕ್ಕಿದೆ. ರಾಜ್ಯದಲ್ಲಿ ಐದು ನ್ಯಾಷನಲ್ ಹೈವೇ ಯೋಜನೆಗಳು, ಏಳು ರೈಲು ಯೋಜನೆಗಳಿಗೆ ಚಾಲನೆ ಕೊಟ್ಟಿದ್ದೇನೆ. ಬೆಂಗಳೂರಿನ ಸಂಚಾರ ದಟ್ಟಣೆ ಇಳಿಸಲು ಹಲವು ಯೋಜನೆ ರೂಪಿಸಲಾಗಿದೆ. ಸಂಚಾರ ದಟ್ಟಣೆಯಿಂದ ಮುಕ್ತಿ ಕೊಡಲು ರೈಲು, ರಸ್ತೆ, ಮೂಲಸೌಕರ್ಯ ಹೆಚ್ಚಿಸಿದ್ದೇವೆ. ಮೂಲಸೌಕರ್ಯ ಕೊಡುವ ಕೆಲಸವನ್ನು ನಮ್ಮ ಡಬಲ್ ಇಂಜಿನ್ ಸರ್ಕಾರ ಮಾಡಿದೆ ಎಂದರು.

ಸಬರ್ಬನ್ ಯೋಜನೆ ಬಗ್ಗೆ 40 ವರ್ಷದಿಂದ ಚರ್ಚೆ ಮಾತ್ರ ನಡೆಯುತ್ತಿತ್ತು. ನಾವು ಈಗ ನಿಮ್ಮ ಕನಸನ್ನು ನನಸು ಮಾಡಿದ್ದೇವೆ. ಸಬರ್ಬನ್ ರೈಲು ಯೋಜನೆ ರೀತಿಯೇ ಬೆಂಗಳೂರು ರಿಂಗ್ ರಸ್ತೆ ಅಗಲೀಕರಣ ಯೋಜನೆ ಮಾಡಲಾಗುತ್ತದೆ. ಇದರಿಂದ ಸಂಚಾರ ದಟ್ಟಣೆ ಕಮ್ಮಿ ಆಗಲಿದೆ ಎಂದು ಹೇಳಿದರು.