ಪ್ರಧಾನಿಗೆ ಪತ್ರ ಬರೆದ 6ರ ಬಾಲಕಿ – ಯಾಕೆ ಗೊತ್ತಾ?

88
firstsuddi

ಲಕ್ನೋ : 6 ವರ್ಷದ ಬಾಲಕಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಬೆಲೆ ಏರಿಕೆಯಿಂದ ತಾನು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಹೇಳಿಕೊಂಡಿದ್ದಾಳೆ. ಆಕೆ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪತ್ರದಲ್ಲೇನಿದೆ?: ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ನಿವಾಸಿಯಾದ ಕೃತಿ ದುಬೆ ಪ್ರಧಾನಿಗೆ ಹಿಂದಿಯಲ್ಲಿ ಪತ್ರವನ್ನು ಬರೆದಿದ್ದು, ನಮಸ್ಕಾರ ಮೋದಿಜಿ, ನೀವು ಅಪಾರ ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ನನ್ನ ಅಭ್ಯಾಸಕ್ಕೆ ಅಗತ್ಯವಿರುವ ಪೆನ್ಸಿಲ್, ರಬ್ಬರ್ ಬೆಲೆ ಸಹ ತುಟ್ಟಿಯಾಗಿದೆ. ನನಗೆ ಇಷ್ಟವಾದ ಮ್ಯಾಗಿಯ ಬೆಲೆಯೂ ದುಬಾರಿಯಾಗಿದೆ. ನಾನು ಅಮ್ಮನ ಬಳಿ ಹೊಸ ಪೆನ್ಸಿಲ್ ಕೇಳಿದರೆ, ನನ್ನ ಮೇಲೆ ರೇಗುತ್ತಾರೆ. ದಬಾಯಿಸುತ್ತಾರೆ. ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾಳೆ. ಅಲ್ಲದೇ, ನನ್ನ ಸಹಪಾಠಿಗಳು ಪೆನ್ಸಿಲ್ ಕದಿಯುತ್ತಾರೆ ಎಂದು ಬಾಲಕಿ ದೂರಿದ್ದಾಳೆ.

ಈ ಬಗ್ಗೆ ಆಕೆಯ ತಂದೆ ವಕೀಲರಾಗಿರುವ ವಿಶಾಲ್ ದುಬೆ, ಇದು ನನ್ನ ಮಗಳ ಮನ್ ಕಿ ಬಾತ್. ಶಾಲೆಯಲ್ಲಿ ಪೆನ್ಸಿಲ್ ಕಳೆದುಕೊಂಡಾಗ ನನ್ನ ಹೆಂಡತಿ ಅವಳನ್ನು ಗದರಿಸಿದಾಗ ಸಿಟ್ಟಾಗಿ ಈ ರೀತಿ ಪತ್ರ ಬರೆದಿದ್ದಾಳೆ ಎಂದು ತಿಳಿಸಿದ್ದಾರೆ.

ಈ ಬಾಲಕಿಯ ಪತ್ರ ವೈರಲ್ ಆಗುತ್ತಿದ್ದಂತೆ ಅಲ್ಲಿನ ಶಿಕ್ಷಣಾಧಿಕಾರಿಗಳ ಗಮನಕ್ಕೂ ಬಂದಿದೆ. ನಾನು ಆ ಮಗುವಿಗೆ ಯಾವುದೇ ರೀತಿಯಲ್ಲೂ ಸಹಾಯ ಮಾಡಲು ಸಿದ್ಧನಿದ್ದೇನೆ. ಆಕೆಯ ಪತ್ರ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಲುಪಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದ್ದಾರೆ.