ಮಂಗಳೂರು ಪಾಲಿಕೆ ಮೇಯರ್ ಆಗಿ ಜಯಾನಂದ ಅಂಚನ್, ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆ…

79
firstsuddi

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜಯಾನಂದ ಅಂಚನ್, ಉಪ ಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾದರು. ಇಂದು ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಇವರ ಆಯ್ಕೆ ನಡೆಯಿತು.

ಬಿಜೆಪಿಯಿಂದ ಮೇಯರ್ ಸ್ಥಾನದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಕದ್ರಿ(ಪದವು) 22 ವಾರ್ಡ್ ಸದಸ್ಯ ಜಯಾನಂದ ಅಂಚನ್ 46 ಮತಗಳನ್ನು ಗಳಿಸಿ ಚುನಾಯಿತರಾದರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಹಿರಿಯ ಕಾರ್ಪೊರೇಟರ್, ದೇರೇಬೈಲ್(ದಕ್ಷಿಣ) 44 ವಾರ್ಡ್ ಸದಸ್ಯ ಶಶಿಧರ ಹೆಗ್ಡೆ ಅವರಿಗೆ 14 ಮತಗಳು ಲಭಿಸಿವೆ.

ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಪೂರ್ಣಿಮಾ(ಸೆಂಟ್ರಲ್ ಮಾರ್ಕೆಟ್ ವಾರ್ಡ್ ಸದಸ್ಯೆ) ಮತ್ತು ಕಾಂಗ್ರೆಸ್ ಪಕ್ಷದಿಂದ ಝೀನತ್ ಸಂಶುದ್ದೀನ್ ಸ್ಪರ್ಧಿಸಿದ್ದರು. ಪೂರ್ಣಿಮಾ ಅವರಿಗೆ 46 ಮತಗಳು ಮತ್ತು ಝೀನತ್ ಸಂಶುದ್ದೀನ್ ಅವರು 14 ಮತಗಳನ್ನು ಪಡೆದುಕೊಂಡರು. ಪೂರ್ಣಿಮಾ ಉಪಮೇಯರ್ ಆಗಿ ಆಯ್ಕೆಯಾದರು. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಜಿ.ಸಿ. ಪ್ರಕಾಶ್ ನೇತೃತ್ವದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಪಾಲಿಕೆಯ 60 ಸ್ಥಾನಗಳಲ್ಲಿ 44 ಬಿಜೆಪಿ ಸ್ಥಾನ, 14 ಕಾಂಗ್ರೆಸ್ ಸ್ಥಾನ ಮತ್ತು 2 ಎಸ್​ಡಿಪಿಐ ಸ್ಥಾನಗಳನ್ನು ಹೊಂದಿದೆ. ಎಸ್​ಡಿಪಿಐನ ಸದಸ್ಯರು ಮತ ಚಲಾಯಿಸದೆ ತಟಸ್ಥರಾಗಿದ್ದರು.