ಎಷ್ಟೇ ದೊಡ್ಡ ಹುಲಿ ಆದ್ರೂ, ಕಾನೂನಿನ ಮುಂದೆ ಎಲ್ಲರೂ ಒಂದೇ : ಬಿಎಸ್‌ವೈ ರಾಜೀನಾಮೆಗೆ ಯತ್ನಾಳ್ ಆಗ್ರಹ…

87
firstsuddi

ಬೆಂಗಳೂರು : ಎಷ್ಟೇ ದೊಡ್ಡ ಹುಲಿ ಇದ್ದರೂ, ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ಹೇಳಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೇಂದ್ರೀಯ ಸಂಸದೀಯ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದರು.

ವಿಧಾನಸೌಧದಲ್ಲಿಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರ್ಟ್ ಆದೇಶ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಯತ್ನಾಳ್, ಎಷ್ಟೇ ದೊಡ್ಡ ಹುಲಿ ಇದ್ದರೂ, ಕಾನೂನಿನ ಮುಂದೆ ಎಲ್ಲರೂ ಒಂದೇ. ಈ ಹಿಂದೆ ಎಲ್.ಕೆ ಅಡ್ವಾಣಿ ಮೇಲೆ ಹವಲಾ ಆರೋಪ ಕೇಳಿ ಬಂದಿತ್ತು. ಆ ಸಂದರ್ಭದಲ್ಲಿ ಅಡ್ವಾಣಿ ಅವರು ಎಲ್ಲ ಸ್ಥಾನಕ್ಕೂ ರಾಜೀನಾಮೆ ನೀಡಿದ್ದರು. ಆದ್ದರಿಂದ ರಾಜಾಹುಲಿ ಇರ್ಲಿ, ಯಾರೇ ಇರಲಿ ಎಲ್ಲರೂ ಕಾನೂನಿಗೆ ಸಮಾನರೇ. ಎಲ್.ಕೆ ಅಡ್ವಾಣಿ, ವಾಜಪೇಯಿಗಿಂತ ದೊಡ್ಡವ್ರಾ ಅವರು? ಬಿಎಸ್ವೈ ಅಡ್ವಾಣಿ ಅವರ ಆದರ್ಶ ಪಾಲಿಸಲಿ, ಕೇಂದ್ರೀಯ ಸಂಸದೀಯ ಮಂಡಳಿಯ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಅವರಿಗೆ ಬೊಮ್ಮಾಯಿ ಭಯ ಇಲ್ಲ, ಯಡಿಯೂರಪ್ಪ ಭಯ ಇಲ್ಲ. ಅವರಿಗೆ ನನ್ನ ಭಯ. ಯತ್ನಾಳ್ ಎಲ್ಲಿ ಬಂದು ಬಿಡ್ತಾನೋ..? ಅನ್ನೋ ಭಯ ಅವರಿಗೆ ಎಂದು ಹೇಳಿದರು. ಯತ್ನಾಳ್ ಸಿಎಂ ಆದ್ರೆ ಜೈಲಿಗೊಬ್ಬರು, ಕಾಡಿಗೆ ಒಬ್ಬರು ಹೋಗಬೇಕಾಗುತ್ತೆ. ತಿಹಾರ್ ಜೈಲಿನಲ್ಲಿ ಯಾವ ಬಂಡೆನೂ ಇಲ್ಲ, ಪಂಡೆನೂ ಇಲ್ಲ,ಸಂಡೇ ಅಷ್ಟೇ ಎಂದರು.