‘ಪೇಸಿಎಂ’ ಪೋಸ್ಟರ್ ವೈರಲ್ ; ಎಫ್ಐಆರ್ ದಾಖಲು…

64
firstsuddi

ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್ ಇನ್ನೊಂದು ಹಂತದ ಹೋರಾಟದ ಅಸ್ತ್ರ ಪ್ರಯೋಗಿಸಿದೆ. ನಗರದಾದ್ಯಂತ ‘ಪೇ-ಸಿಎಂ’ ಎಂದು ಕ್ಯೂಆರ್ ಕೋಡ್ ಇರುವ ಪೋಸ್ಟರ್ ಅಂಟಿಸಿದೆ.

ಸಿಎಂ ನಿವಾಸದ ರಸ್ತೆ, ಸಿದ್ದರಾಮಯ್ಯ ಸರ್ಕಾರಿ ನಿವಾಸದ ರಸ್ತೆ ಸೇರಿದಂತೆ ಹಲವು ಕಡೆ ಪೋಸ್ಟರ್ ಅಂಟಿಸಲಾಗಿದೆ. ಸಿಎಂ ಭಾವಚಿತ್ರದೊಂದಿಗೆ ಅಳವಡಿಸಿರುವ ಈ ಕ್ಯೂಆರ್ ಕೋಡ್ ನ್ನು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದರೆ ಅದು ಬಳಕೆದಾರರನ್ನು ದೂರುಗಳಿಗಾಗಿ ಇತ್ತೀಚೆಗೆ ಕಾಂಗ್ರೆಸ್ ಬಿಡುಗಡೆ ಮಾಡಿದ ‘40% ಕಮಿಷನ್ ಸರ್ಕಾರ’ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ. ಸಾರ್ವಜನಿಕರು ನೇರವಾಗಿ ಈ ಮೂಲಕವೂ ಕಾಂಗ್ರೆಸ್ ವೆಬ್ ಸೈಟ್ ಮೂಲಕ ತಮ್ಮ ದೂರುಗಳನ್ನು ಸಲ್ಲಿಸಬಹುದಾಗಿದೆ.

ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತು ಹಿರಿಯ ಪೊಲೀಸರ ವಿರುದ್ಧ ಗರಂ ಆಗಿದ್ದಾರೆ. ಗರಂ ಆದ ಬೆನ್ನಲ್ಲೇ ಪೊಲೀಸರು ಪೋಸ್ಟರ್ ಗಳನ್ನು ತೆರವು ಮಾಡಿದ್ದಾರೆ.

ಕರ್ನಾಟಕ ತೆರೆದ ಸ್ಥಳಗಳ (ವಿಕಾರ ತಡೆಗಟ್ಟುವಿಕೆ) ಕಾಯ್ದೆಯ ಅಡಿ ಕೇಂದ್ರ ವಿಭಾಗದಲ್ಲಿ ಒಂದು ಎಫ್ಐಆರ್ ದಾಖಲಾಗಿದೆ. ಈಗಾಗಲೇ ಸಂಬಂಧಪಟ್ಟ ಡಿಸಿಪಿಗಳಿಂದ ಮಾಹಿತಿ ಕೇಳಲಾಗಿದೆ. ಸದ್ಯಕ್ಕೆ ಒಂದು ಎಫ್ಐಆರ್ ಮಾತ್ರ ಆಗಿದ್ದು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿದ್ದಾರೆ.